ಕರ್ನಾಟಕ

karnataka

ETV Bharat / international

ಪಿಎಂ ಮೋದಿ ಅಮೆರಿಕ ಭೇಟಿಗೂ ಮುನ್ನ ಶ್ವೇತಭವನದ ಹೊರಗೆ ಹಾರಾಡುತ್ತಿರುವ ತ್ರಿವರ್ಣ ಧ್ವಜ - Modi Visit To US

ಜೂನ್ 20 ರಿಂದ 25ರ ವರೆಗೆ ಪ್ರಧಾನಿ ನರೇಂದ್ರ ಮೋದಿ ವಿದೇಶ ಪ್ರವಾಸ ಕೈಗೊಂಡಿದ್ದು, ಅಮೆರಿಕ ಭೇಟಿಗೂ ಮುನ್ನವೇ ಶ್ವೇತಭವನದ ಹೊರಗಡೆ ಭಾರತೀಯ ತ್ರಿವರ್ಣ ಧ್ವಜ ರಾರಾಜಿಸುತ್ತಿದೆ.

Tricolour
ತ್ರಿವರ್ಣ ಧ್ವಜ

By

Published : Jun 17, 2023, 8:25 AM IST

ವಾಷಿಂಗ್ಟನ್ ಡಿಸಿ (ಅಮೆರಿಕ): ಪ್ರಧಾನಿ ನರೇಂದ್ರ ಮೋದಿ ಅವರ ಅಮೆರಿಕ ಭೇಟಿಗೂ ಮುನ್ನವೇ ವಾಷಿಂಗ್ಟನ್ ಡಿಸಿಯ ಶ್ವೇತಭವನದ ಹೊರಗಡೆ ಭಾರತೀಯ ತ್ರಿವರ್ಣ ಧ್ವಜ ಹಾರಾಡುತ್ತಿದೆ. ಜೂನ್ 20 ರಿಂದ 25ರವರೆಗೆ ಮೋದಿ ವಿದೇಶ ಪ್ರವಾಸ ಕೈಗೊಳ್ಳಲಿದ್ದು, ಅಮೆರಿಕ ಮತ್ತು ಈಜಿಪ್ಟ್​ಗೆ ಪ್ರತ್ಯೇಕವಾಗಿ ಭೇಟಿ ನೀಡಲಿದ್ದಾರೆ.

ಶ್ವೇತಭವನದ ಹೊರಗೆ ಭಾರತೀಯ ಧ್ವಜ ರಾರಾಜಿಸುತ್ತಿರುವ ಕುರಿತು ಮಾತನಾಡಿದ ನ್ಯೂಜೆರ್ಸಿಯಲ್ಲಿ ನೆಲೆಸಿರುವ ಭಾರತೀಯ ಪ್ರಜೆ ಜೆಸಲ್ ನಾರ್, "ನಮ್ಮ ತ್ರಿವರ್ಣ ಧ್ವಜವನ್ನು ನೋಡುವುದು ನಿಜವಾಗಿಯೂ ಗೌರವ ಮತ್ತು ಹೆಮ್ಮೆಯ ವಿಚಾರ, ಕೆಲಸದ ಉದ್ದೇಶಕ್ಕಾಗಿ ಯುನೈಟೆಡ್ ಸ್ಟೇಟ್ಸ್‌ನಾದ್ಯಂತ ತಿರುಗಾಡುವಾಗ ನಾನು ತ್ರಿವರ್ಣ ಧ್ವಜವನ್ನು ತೆಗೆದುಕೊಂಡೇ ಹೋಗುತ್ತಿರುತ್ತೇನೆ" ಎಂದು ಹೇಳಿದ್ದಾರೆ.

"ಶ್ವೇತಭವನದ ಮುಂದೆ ತ್ರಿವರ್ಣ ಧ್ವಜವು ಮುಕ್ತವಾಗಿ ಹಾರಾಡುತ್ತಿರುವುದನ್ನು ನೋಡಿದಾಗ ನಮ್ಮ ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿಯವರು ವಾಷಿಂಗ್ಟನ್ ಡಿಸಿಗೆ ಭೇಟಿ ನೀಡುವುದನ್ನು ಸೂಚಿಸುತ್ತಿದೆ. ಭಾರತದಲ್ಲಿ ಹೆಚ್ಚಿನ ತಾಂತ್ರಿಕ ಪ್ರಗತಿ ಸಾಧಿಸಲು ಈ ಭೇಟಿಯು ಹೆಚ್ಚು ಮಹತ್ವದಾಗಿದೆ" ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಪ್ರಧಾನಿ ಮೋದಿ ಅವರು ಮುಂದಿನ ವಾರ ಅಮೆರಿಕಕ್ಕೆ ಭೇಟಿ ನೀಡಲು ಸಿದ್ಧರಾಗಿದ್ದಾರೆ. ಜೂನ್ 20-24 ರವರೆಗೆ ಯುಎಸ್ ಕಾಂಗ್ರೆಸ್‌ನ ಜಂಟಿ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಜೊತೆಗೆ, ಹಲವಾರು ಅಮೆರಿಕನ್​​ ರಾಜಕಾರಣಿಗಳು, ಪ್ರಮುಖ ನಾಗರಿಕರು ಮತ್ತು ವಲಸೆಗಾರ ಜೊತೆ ಚರ್ಚೆ ನಡೆಸಲಿದ್ದಾರೆ. ಈ ಮಧ್ಯೆ, ಶ್ವೇತಭವನದ ದಕ್ಷಿಣ ಲಾನ್‌ನಲ್ಲಿ ಪ್ರಧಾನಿ ಮೋದಿ ಔಪಚಾರಿಕ ಸ್ವಾಗತಕ್ಕಾಗಿ ತಯಾರಿ ಭರದಿಂದ ನಡೆಯುತ್ತಿದೆ.

ಅಮೆರಿಕ ಅಧ್ಯಕ್ಷ ಜೋ ಬೈಡನ್ ಮತ್ತು ಪತ್ನಿ ಜಿಲ್ ಬೈಡನ್ ಅವರ ಆಹ್ವಾನದ ಮೇರೆಗೆ ಪಿಎಂ ಮೋದಿ ಅಮೆರಿಕಕ್ಕೆ ಭೇಟಿ ನೀಡುತ್ತಿದ್ದಾರೆ. ನ್ಯೂಯಾರ್ಕ್​ಕ್ಕೆ ಭೇಟಿ ನೀಡಲಿದ್ದು, ಜೂನ್ 21 ರಂದು ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ನೇತೃತ್ವವನ್ನ ವಹಿಸಲಿದ್ದಾರೆ.

ನಂತರ ಅವರು ವಾಷಿಂಗ್ಟನ್ ಡಿಸಿಗೆ ಪ್ರಯಾಣಿಸಲಿದ್ದಾರೆ, ಅಲ್ಲಿ ಜೂನ್ 22 ರಂದು ಶ್ವೇತಭವನದಲ್ಲಿ ವಿಧ್ಯುಕ್ತ ಸ್ವಾಗತ ಸ್ವೀಕರಿಸಲಿದ್ದಾರೆ. ಬಳಿಕ, ಉನ್ನತ ಮಟ್ಟದ ಮಾತುಕತೆ ನಡೆಸುವ ಸಲುವಾಗಿ ಅಧ್ಯಕ್ಷ ಬೈಡನ್ ಅವರನ್ನು ಭೇಟಿ ಮಾಡಲಿದ್ದಾರೆ. ಅಂದು ಸಂಜೆಯೇ ಶ್ವೇತಭವನದಲ್ಲಿ ಬೈಡನ್ ಮತ್ತು ಜಿಲ್ ಬೈಡನ್ ದಂಪತಿ ಪಿಎಂ ಮೋದಿ ಅವರಿಗೆ ಗೌರವಾರ್ಥ ಔತಣಕೂಟ ಆಯೋಜಿಸಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನೂ ಓದಿ :ಜೂನ್​ 21ರಿಂದ ಮೋದಿ ಅಮೆರಿಕ ಪ್ರವಾಸ: ಸ್ವಾಗತ ಕೋರಿದ ಸೆನೆಟರ್ ಸಿಂಡಿ ಹೈಡ್ -ಸ್ಮಿತ್

ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನ ಸ್ಪೀಕರ್ ಕೆವಿನ್ ಮೆಕಾರ್ಥಿ ಮತ್ತು ಸೆನೆಟ್‌ನ ಸ್ಪೀಕರ್ ಚಾರ್ಲ್ಸ್ ಶುಮರ್ ಸೇರಿದಂತೆ US ಕಾಂಗ್ರೆಸ್ ನಾಯಕರ ಆಹ್ವಾನದ ಮೇರೆಗೆ ಪ್ರಧಾನಿ ಮೋದಿಯವರು ಜೂನ್ 22 ರಂದು ಅಮೆರಿಕ ಕಾಂಗ್ರೆಸ್‌ನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಜೂನ್ 23 ರಂದು, ಪ್ರಧಾನ ಮಂತ್ರಿಗಳಿಗಾಗಿ ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಮತ್ತು ರಾಜ್ಯ ಕಾರ್ಯದರ್ಶಿ ಆಂಟೋನಿ ಬಿಲ್ನ್ಕೆನ್ ಅವರು ಜಂಟಿಯಾಗಿ ಭೋಜನಕೂಟವನ್ನು ಆಯೋಜಿಸಿದ್ದು, ಅದರಲ್ಲಿ ಭಾಗಿಯಾಗಲಿದ್ದಾರೆ. ಜೊತೆಗೆ, ಪ್ರಮುಖ ಸಿಇಒಗಳು, ವೃತ್ತಿಪರರೊಂದಿಗೆ ಸಂವಾದ ನಡೆಸಲಿದ್ದಾರೆ. ಅದೇ ದಿನ ಭಾರತೀಯ ಅನಿವಾಸಿ ಸದಸ್ಯರನ್ನೂ ಭೇಟಿಯಾಗಲಿದ್ದಾರೆ.

ABOUT THE AUTHOR

...view details