ಪೇಶಾವರ(ಪಾಕಿಸ್ತಾನ): ವಾಯುವ್ಯ ಪಾಕಿಸ್ತಾನದಲ್ಲಿ ಕಲ್ಲಿದ್ದಲು ಗಣಿ ವಿಂಗಡಣೆಗೆ ಸಂಬಂಧಿಸಿದಂತೆ ಎರಡು ಬುಡಕಟ್ಟು ಜನಾಂಗದವರ ನಡುವಿನ ಘರ್ಷಣೆಯಲ್ಲಿ 15 ಮಂದಿ ಸಾವನ್ನಪ್ಪಿದ್ದಾರೆ. ಪೇಶಾವರ ಪ್ರಕ್ಷುಬ್ಧ ವಾಯುವ್ಯ ಪ್ರದೇಶದಲ್ಲಿ ಕಲ್ಲಿದ್ದಲು ಗಣಿ ವಿಂಗಡಣೆಗೆ ಸಂಬಂಧಿಸಿದಂತೆ ಸೋಮವಾರ 2 ಬುಡಕಟ್ಟು ಗುಂಪಿನ ನಡುವೆ ಬಂದೂಕಿನ ಮೂಲಕ ರಕ್ತಸಿಕ್ತ ಘರ್ಷಣೆ ನಡೆದು ಈವರೆಗೆ 15 ಜನರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಹತ್ ಜಿಲ್ಲೆಯ ಪೇಶಾವರದಿಂದ ನೈಋತ್ಯಕ್ಕೆ 35 ಕಿಮೀ ದೂರದಲ್ಲಿರುವ ದರ್ರಾ ಆಡಮ್ ಖೇಕ್ ಪ್ರದೇಶದಲ್ಲಿ ಬುಲಂದರಿಯ ಗುಡ್ಡಗಾಡು ಸಮುದಾಯದ ಭಾಗವಾಗಿರುವ ಸನ್ನಿಖೇಲ್ ಮತ್ತು ಜರ್ಘುನ್ ಖೇಲ್ ಬುಡಕಟ್ಟು ಜನಾಂಗದವರ ನಡುವೆ ಗಣಿ ಡಿಲಿಮಿಟೇಶನ್ ಕುರಿತು ಗಲಾಟೆ ನಡೆದಿದೆ. ಈ ವಿಷಯವು ಅವರ ಮಧ್ಯೆ ಹೊಡೆದಾಟಕ್ಕೆ ತಿರುಗಿ ಸಾವಿಗೆ ಕಾರಣವಾಗಿದೆ. ಸದ್ಯ ಸಾವನ್ನಪ್ಪಿದವರ ಮೃತದೇಹಗಳನ್ನು ಮತ್ತು ಗಾಯಗೊಂಡವರನ್ನು ಪೇಶಾವರ ಆಸ್ಪತ್ರೆಗೆ ರವಾನಿಸಲಾಗಿದೆ.
ಇದನ್ನೂ ಓದಿ:15 ವರ್ಷದಿಂದ ಸಿಕ್ ಲೀವ್, ₹55 ಲಕ್ಷ ಸಂಬಳ: ಆದ್ರೂ ಕಂಪನಿ ವಿರುದ್ಧ ಕೇಸ್ ಜಡಿದ ಉದ್ಯೋಗಿ!
ಈ ಸಂಘರ್ಷದಲ್ಲಿ ಸಾವನ್ನಪ್ಪಿದವರನ್ನು ಬಿಟ್ಟರೆ ಗಾಯಗೊಂಡವರ ನಿಖರ ಸಂಖ್ಯೆ ತಕ್ಷಣವೇ ತಿಳಿದು ಬಂದಿಲ್ಲ, ಆದರೆ ಗುಂಡಿನ ಚಕಮಕಿಯಲ್ಲಿ ಎರಡೂ ಜನಾಂಗದವರಲ್ಲಿ ಸಾವು ನೋವುಗಳು ಸಂಭವಿಸಿವೆ. ಘಟನಾ ಸ್ಥಳಕ್ಕೆ ಪೊಲೀಸರು ಮತ್ತು ಇತರ ಭದ್ರತಾ ಪಡೆಗಳ ಜಂಟಿ ತಂಡಗಳು ಧಾವಿಸಿದ್ದು, ಬುಡಕಟ್ಟು ಜನರ ನಡುವಿನ ಗುಂಡಿನ ದಾಳಿಯನ್ನು ನಿಲ್ಲಿಸಿದ್ದಾರೆ. ಆದರೆ, ಅಷ್ಟರಲ್ಲಿ ಹಲವರ ಪ್ರಾಣ ಪಕ್ಷಿ ಹಾರಿ ಹೋಗಿದೆ ಎಂದು ಅಲ್ಲಿನ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.