ಇಸ್ಲಾಮಾಬಾದ್:ಪಾಕಿಸ್ತಾನದಲ್ಲಿ ಇಂದು (ಭಾನುವಾರ) ಸಂಭವಿಸಿದ ಭೀಕರ ರೈಲು ಅವಘಡದಲ್ಲಿ 30 ಪ್ರಯಾಣಿಕರು ಅಸುನೀಗಿದ್ದಾರೆ. ಘಟನೆಯಲ್ಲಿ 100ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ಕರಾಚಿಯಿಂದ ರಾವಲ್ಪಿಂಡಿಗೆ ತೆರಳುತ್ತಿದ್ದ ಹಜಾರಾ ಎಕ್ಸ್‌ಪ್ರೆಸ್ ರೈಲು ಹಳಿ ತಪ್ಪಿ ದುರಂತ ಜರುಗಿತು.
"ಶಹಜಾದ್‌ಪುರ ಮತ್ತು ನವಾಬ್‌ಶಾ ನಡುವಿನ ಸಹಾರಾ ರೈಲು ನಿಲ್ದಾಣದ ಬಳಿ ಹಜಾರಾ ರೈಲು ಹೊರಡುತ್ತಿದ್ದಾಗ ಅಚಾನಕ್ಕಾಗಿ ಹಳಿ ತಪ್ಪಿದೆ. 8 ರಿಂದ 10 ಬೋಗಿಗಳು ಅಪಘಾತಕ್ಕೀಡಾಗಿವೆ. ಕನಿಷ್ಠ 30 ಜನರು ಸಾವನ್ನಪ್ಪಿ, 100ಕ್ಕೂ ಅಧಿಕ ಪ್ರಯಾಣಿಕರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ನವಾಬ್‌ಶಾಹ್‌ನಲ್ಲಿರುವ ಪೀಪಲ್ಸ್ ಮೆಡಿಕಲ್ ಆಸ್ಪತ್ರೆಗೆ ರವಾನಿಸಲಾಗಿದೆ. ಈಗಾಗಲೇ 15 ಜನರ ಶವಗಳನ್ನು ಹೊರತೆಗೆಯಲಾಗಿದ್ದು, ಕಾರ್ಯಾಚರಣೆ ಭರದಿಂದ ನಡೆಯುತ್ತಿದೆ" ಎಂದು ಅಲ್ಲಿನ ಪೊಲೀಸರು ತಿಳಿಸಿದ್ದಾರೆ.
"ಹಳಿ ತಪ್ಪಿದ 10 ಬೋಗಿಗಳು ಭೀಕರವಾಗಿ ಅಪಘಾತಕ್ಕೀಡಾಗಿವೆ. ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ. ಬೋಗಿಗಳಲ್ಲಿ ಸಿಲುಕಿರುವ ಗಾಯಾಳುಗಳನ್ನು ರಕ್ಷಿಸುವ ಕಾರ್ಯ ನಡೆಯುತ್ತಿದೆ. ಸ್ಥಳಕ್ಕೆ ರಕ್ಷಣಾ ಪಡೆಗಳು ಧಾವಿಸಿವೆ. ಸ್ಥಳೀಯರ ಸಹಾಯದಿಂದ ಪ್ರಯಾಣಿಕರ ರಕ್ಷಣೆಗೆ ಶ್ರಮಿಸಲಾಗುತ್ತಿದೆ" ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
"ಅಪಘಾತದ ಕಾರಣ ತಿಳಿದುಬಂದಿಲ್ಲ. ಈ ಬಗ್ಗೆ ತನಿಖೆ ನಡೆಸಲಾಗುವುದು" ಎಂದು ಪಾಕಿಸ್ತಾನ ರೈಲ್ವೆಯ ಉಪ ಅಧೀಕ್ಷಕ ಮಹಮೂದ್ ರೆಹಮಾನ್ ಹೇಳಿದರು.