ಬೀಜಿಂಗ್ (ಚೀನಾ) : ಚೀನಾದ ಈಶಾನ್ಯ ನಗರವಾದ ಕಿಕಿಹಾರ್‌ನಲ್ಲಿರುವ ಮಾಧ್ಯಮಿಕ ಶಾಲೆಯಲ್ಲಿನ ಜಿಮ್ ಮೇಲ್ಛಾವಣಿ ಕುಸಿದು ಹತ್ತು ಜನ ಸಾವನ್ನಪ್ಪಿದ್ದಾರೆ ಎಂದು ಚೀನಾದ ಸರ್ಕಾರಿ ಮಾಧ್ಯಮ ವರದಿ ಮಾಡಿದೆ. ಅಪಘಾತದ ಸಮಯದಲ್ಲಿ ಜಿಮ್‌ನಲ್ಲಿ 19 ಜನರಿದ್ದರು. ಸ್ಥಳೀಯ ಶೋಧ ಮತ್ತು ರಕ್ಷಣಾ ಕೇಂದ್ರದ ಪ್ರಕಾರ, ದುರಂತ ಘಟನೆ ನಡೆದಾಗ ಹದಿನೈದು ಮಂದಿ ಒಳಗೆ ಸಿಲುಕಿಕೊಂಡಿದ್ದರು ಮತ್ತು ನಾಲ್ವರು ಪಾರಾಗಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ, ಪಕ್ಕದ ಕಟ್ಟಡದ ನಿರ್ಮಾಣದ ಸಮಯದಲ್ಲಿ ಜಿಮ್ ಛಾವಣಿ ಮೇಲೆ ಉಳಿದಿರುವ ಪರ್ಲೈಟ್ ಎಂಬ ನಿರ್ಮಾಣ ತ್ಯಾಜ್ಯವು ಕುಸಿತಕ್ಕೆ ಕಾರಣವಾಗಿರಬಹುದು ಎಂದು ವರದಿ ತಿಳಿಸಿವೆ.
ಆರಂಭಿಕ ತನಿಖೆಯ ಪ್ರಕಾರ, ತ್ಯಾಜ್ಯ ವಸ್ತುವು ಮಳೆ ನೀರಿನೊಂದಿಗೆ ಸೇರಿಕೊಂಡಾಗ ಅದರ ಭಾರ ಹೆಚ್ಚಾಗಿದೆ. ಅದರ ಭಾರ ತೀರಾ ಹೆಚ್ಚಾದಾಗ ಮೇಲ್ಛಾವಣಿ ಕುಸಿದಿದೆ. ನಿರ್ಮಾಣದ ಉಸ್ತುವಾರಿ ವಹಿಸಿದ್ದವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಘಟನೆಯ ಬಗ್ಗೆ ಸೂಕ್ತ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಚೀನಾಕ್ಕೆ ವೀಸಾ ಮುಕ್ತ ಪ್ರವೇಶ: ಸಿಂಗಾಪೂರ್ ಮತ್ತು ಬ್ರೂನಿ ನಾಗರಿಕರಿಗೆ ಚೀನಾ ಬುಧವಾರದಿಂದ 15 ದಿನಗಳ ವೀಸಾ ಮುಕ್ತ ಪ್ರವೇಶ ಪುನಾರಂಭಿಸಲಿದೆ. ಕೋವಿಡ್-19 ಸಮಯದಲ್ಲಿ ಈ ದೇಶಗಳ ನಾಗರಿಕರಿಗೆ ವೀಸಾ ಮುಕ್ತ ಪ್ರವೇಶ ಸ್ಥಗಿತಗೊಳಿಸಲಾಗಿತ್ತು. ಆದರೆ, ಮೂರು ವರ್ಷಗಳ ನಂತರ ಈ ಸೌಲಭ್ಯ ಮತ್ತೆ ಆರಂಭವಾಗುತ್ತಿದೆ ಎಂದು ಉಭಯ ದೇಶಗಳಲ್ಲಿನ ಅದರ ರಾಯಭಾರ ಕಚೇರಿಗಳು ತಿಳಿಸಿವೆ.