ಬೋಕ್ಸ್‌ಬರ್ಗ್ (ದಕ್ಷಿಣ ಆಫ್ರಿಕಾ):ಇಲ್ಲಿನ ಎಕುರ್‌ಹುಲೇನಿಯ ಬೋಕ್ಸ್‌ಬರ್ಗ್‌ನ ನಗರದಲ್ಲಿ ಬುಧವಾರ ರಾತ್ರಿ ವಿಷಾನಿಲ ಸೋರಿಕೆಯಾಗಿ, ಅದನ್ನು ಸೇವಿಸಿದ 24 ಜನರು ಸಾವನ್ನಪ್ಪಿದ್ದಾರೆ. ಮೃತರಲ್ಲಿ ಮಕ್ಕಳು, ಮಹಿಳೆಯರು ಇದ್ದಾರೆ. ಸಾವುಗಳು ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದ್ದು, ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಸಿಲಿಂಡರ್ನಿಂದ ವಿಷಾನಿಲ ನೈಟ್ರೇಟ್ ಆಕ್ಸೈಡ್ ಸೋರಿಕೆಯಾಗಿದೆ. ಬೋಕ್ಸ್‌ಬರ್ಗ್ ಪ್ರದೇಶದಲ್ಲಿ ಅಕ್ರಮ ಚಿನ್ನದ ಗಣಿಗಾರಿಕೆ ನಡೆಸಲಾಗುತ್ತದೆ ಎಂದು ಹೇಳಲಾಗಿದೆ. ಚಿನ್ನವನ್ನು ಸಂಸ್ಕರಿಸಲು ಗುಡಿಸಲುಗಳಲ್ಲಿ ಜನರು ಸಿಲಿಂಡರ್ ಬಳಸುತ್ತಿದ್ದರು. ಈ ವೇಳೆ ಸಿಲಿಂಡರ್ನಿಂದ ಗ್ಯಾಸ್ ಸೋರಿಕೆಯಾಗಿ ಅನಾಹುತ ಘಟಿಸಿದೆ.
ಜಮಾ- ಜಮಾಸ್ ಎಂದು ಕರೆಯಲಾಗುವ ಸಮುದಾಯ ಗಣಿಗಳಲ್ಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದೆ. ಇಲ್ಲಿಯೇ ಚಿಕ್ಕಪುಟ್ಟ ಗುಡಿಸಲುಗಳನ್ನು ನಿರ್ಮಿಸಿಕೊಂಡಿದ್ದಾರೆ. ಅಕ್ರಮ ಚಿನ್ನವನ್ನು ಸಂಸ್ಕರಿಸಿ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ. ಇದಕ್ಕಾಗಿ ತಮ್ಮ ಗುಡಿಸಲುಗಳಲ್ಲಿ ಗ್ಯಾಸ್ ಸಿಲಿಂಡರ್ ಬಳಕೆ ಮಾಡುತ್ತಿದ್ದರು. ಇದರಿಂದಲೇ ವಿಷಾನಿಲ ಸೋರಿಕೆಯಾಗಿದೆ.
ದುರಂತ ಸ್ಥಳದಲ್ಲಿ ವಿಷಾನಿಲ ಸೋರಿಕೆ ನಿಂತಿದೆ ಎಂದು ತಿಳಿದು ಬಂದಿದೆ. ರಕ್ಷಣಾ ಪಡೆಗಳು ಬದುಕುಳಿದ ಜನರಿಗಾಗಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ. ವಿಷಾನಿಲದಿಂದ ಪೀಡಿತರಾದ ಜನರಿಗೆ ವೈದ್ಯರು ಚಿಕಿತ್ಸೆ ನೀಡಲೂ ಹೆದರುತ್ತಿದ್ದಾರೆ ಎಂದು ತಿಳಿದುಬಂದಿದೆ.
"ಅನಿಲ ಯಾವಾಗ ಸೋರಿಕೆಯಾಯಿತು ಎಂಬುದು ಖಚಿತವಾಗಿಲ್ಲ. ಮಾಹಿತಿ ಸಿಕ್ಕ ಬಳಿಕ ಘಟನಾ ಸ್ಥಳಕ್ಕೆ ಬರುವ ಹೊತ್ತಿಗೆ ಜನರು ಪ್ರಾಣ ಕಳೆದುಕೊಂಡಿದ್ದರು. ಇಲ್ಲಿನ ಪರಿಸ್ಥಿತಿ ಚಿಂತಾಜನಕವಾಗಿದೆ. 2,5 ವರ್ಷದ ಮಕ್ಕಳು, ಮಹಿಳೆಯರು ಜೀವ ಕಳೆದುಕೊಂಡಿದ್ದಾರೆ. ವಿಷಾನಿಲ ಅಕ್ರಮ ವಸಾಹತು ಪ್ರದೇಶವನ್ನೆಲ್ಲಾ ಆವರಿಸಿಕೊಂಡಿದೆ" ಎಂದು ಅಲ್ಲಿನ ಅಧಿಕಾರಿಗಳು ಮಾಹಿತಿ ನೀಡಿದರು.
"ಆರಂಭದಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟ ಸಂಭವಿಸಿದೆ ಎಂದು ಮಾಹಿತಿ ಬಂದಿತ್ತು. ಹೆಚ್ಚಿನ ತನಿಖೆಯ ನಂತರ ಅದು ಸ್ಫೋಟವಲ್ಲ, ಗ್ಯಾಸ್ ಸೋರಿಕೆ ಎಂಬುದು ತಿಳಿದುಬಂತು. ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ" ಎಂದು ಅಧಿಕಾರಿಗಳು ಹೇಳಿದ್ದಾರೆ.
ಆಂಧ್ರ ಪ್ರದೇಶದಲ್ಲಿ ನಡೆದ ಗ್ಯಾಸ್ ಸೋರಿಕೆ ಪ್ರಕರಣ:ಇತ್ತೀಚೆಗೆ ಆಂಧ್ರ ಪ್ರದೇಶದ ಅನಕಾಪಲ್ಲಿ ಜಿಲ್ಲೆಯ ಅಚ್ಯುತಪುರಂನ ಎಸ್ಇಜೆಡ್ನಲ್ಲಿರುವ ಕಾರ್ಖಾನೆಯಲ್ಲಿ ಅಮೋನಿಯಂ ವಿಷಾನಿಲ ಸೋರಿಕೆಯಾಗಿ, ಮಹಿಳಾ ಕಾರ್ಮಿಕರು ಅಸ್ವಸ್ಥಗೊಂಡ ಘಟನೆ ನಡೆದಿತ್ತು. ಕಾರ್ಖಾನೆಯಲ್ಲಿ ಇದ್ದಕ್ಕಿಂದ್ದಂತೆ ವಿಷಾನಿಲ ಸೋರಿಕೆಯಾಗಿ, ಕಾರ್ಮಿಕರಿಗೆ ತಲೆ ತಿರುಗುವಿಕೆ, ವಾಂತಿ ಕಂಡು ಬಂದಿದೆ. ಸುಮಾರು 30ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿದ್ದರು. ವಿಷಾನಿಲ ಹರಡಿದ ಸುದ್ದಿ ತಿಳಿದು ಘಟನಾ ಸ್ಥಳಕ್ಕೆ ಬಂದ ಅಧಿಕಾರಿಗಳು 20 ಆ್ಯಂಬುಲೆನ್ಸ್‌ಗಳನ್ನು ಕರೆಯಿಸಿ ಅಸ್ವಸ್ಥ ಮಹಿಳಾ ಕಾರ್ಮಿಕರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಯಾವುದೇ ಹಾನಿ ಸಂಭವಿಸಲಿಲ್ಲ.
ಇದನ್ನೂ ಓದಿ:ಲೂಧಿಯಾನ ದುರಂತ: ಕಾರ್ಖಾನೆಗೆ ಕ್ಲೀನ್ ಚಿಟ್, ಜನರ ಸಾವಿಗೆ ಕೊಳಚೆ ಅನಿಲವೇ ಕಾರಣ