ಲಾಹೋರ್ (ಪಾಕಿಸ್ತಾನ) : ತಮ್ಮನ್ನು ಹತ್ಯೆ ಮಾಡುವ ಯತ್ನಗಳ ಹಿಂದೆ ಉನ್ನತ ಗುಪ್ತಚರ ಅಧಿಕಾರಿಯೊಬ್ಬರು ಪ್ರಮುಖ ಪಾತ್ರ ವಹಿಸಿದ್ದಾರೆ ಮತ್ತು ಭವಿಷ್ಯದಲ್ಲಿ ನನಗೆ ಏನೇ ಅಪಾಯವಾದರೂ ಅದಕ್ಕೆ ಅವರೇ ಹೊಣೆಗಾರರಾಗಿರುತ್ತಾರೆ ಎಂದು ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ಮುಖ್ಯಸ್ಥ ಇಮ್ರಾನ್ ಖಾನ್ ಗುರುವಾರ ಆರೋಪಿಸಿದ್ದಾರೆ. ತಮ್ಮನ್ನು ಕೊಲೆ ಮಾಡಲು ಯತ್ನಿಸುತ್ತಿರುವ ದುಷ್ಟ ವ್ಯಕ್ತಿಯಾಗಿರುವ ಉನ್ನತ ಅಧಿಕಾರಿಯ ಬಗ್ಗೆ ತಾವು ಈಗಾಗಲೇ ಲಾಹೋರ್ ಹೈಕೋರ್ಟ್ಗೆ ಮಾಹಿತಿ ನೀಡಿರುವುದಾಗಿ ಇಮ್ರಾನ್ ಖಾನ್ ವೀಡಿಯೊ ಸಂದೇಶದಲ್ಲಿ ಹೇಳಿದ್ದಾರೆ. ವಜೀರಾಬಾದ್ ಪ್ರಕರಣದ ತನಿಖೆ ನಡೆಸುತ್ತಿರುವ ಜಂಟಿ ತನಿಖಾ ತಂಡದ (ಜೆಐಟಿ) ವರದಿಗಳನ್ನು ಅಧಿಕಾರಿಗಳು ಹಾಳು ಮಾಡಿದ್ದಾರೆ ಎಂದು ಅವರು ಹೇಳಿದರು.
ಭಯೋತ್ಪಾದಕರು ನನ್ನನ್ನು ಕೊಲ್ಲಲು ಯತ್ನಿಸುತ್ತಿದ್ದಾರೆ ಎಂದು ಅವರು ಹೇಳುತ್ತಿದ್ದಾರೆ. ಆದರೆ ನನಗೆ ಏನೇ ಆದರೂ ಅದಕ್ಕೆ ಆ ದುಷ್ಟ ಅಧಿಕಾರಿಯೇ ಕಾರಣವಾಗಲಿದ್ದಾರೆ. ಆ ನಿರ್ದಿಷ್ಟ ಅಧಿಕಾರಿ ಹಾಗೂ ಆತನ ಸಹವರ್ತಿಗಳನ್ನು ಹೊರತುಪಡಿಸಿ ಬೇರೆ ಯಾರಿಂದಲೂ ನನಗೆ ಬೆದರಿಕೆಗಳು ಬಂದಿಲ್ಲ ಎಂದು ಇಮ್ರಾನ್ ಹೇಳಿದ್ದಾರೆ. ವೀಲ್ಚೇರ್ನಲ್ಲಿ ಕುಳಿತು ಇಮ್ರಾನ್ ಖಾನ್ ಕೋರ್ಟ್ಗೆ ಹಾಜರಾಗಿದ್ದರು. ಕೋರ್ಟ್ಗೆ ಹೋಗುವ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನ್ನ ಕಾಲು ನೋವಿನಿಂದ ಊದಿಕೊಂಡಿದ್ದರೂ ಕೋರ್ಟ್ ಆದೇಶ ಪಾಲನೆ ಮಾಡಲು ನಾನು ಹೋಗುತ್ತಿರುವೆ. ತಮ್ಮ ಪರವಾಗಿ ತೀರ್ಪು ಬರದೆ ಇದ್ದಾಗ ನ್ಯಾಯಾಲಯಗಳನ್ನು ಟೀಕಿಸುವವರ ರೀತಿ ನಾನಲ್ಲ. ನಾನು ಯಾವಾಗಲೂ ನ್ಯಾಯಾಲಯವನ್ನು ಗೌರವಿಸಿದ್ದೇನೆ ಎಂದರು.
ಶಾಲೆಯಲ್ಲಿ ಗುಂಡಿನ ದಾಳಿ- ಏಳು ಶಿಕ್ಷಕರು ಸಾವು: ಗುರುವಾರ ಖೈಬರ್ ಪಖ್ತುಂಖ್ವಾದ ಅಪ್ಪರ್ ಕುರ್ರಂ ತೆಹಸಿಲ್‌ನಲ್ಲಿರುವ ಶಾಲೆಯೊಂದರಲ್ಲಿ ಅಪರಿಚಿತ ಶಸ್ತ್ರಸಜ್ಜಿತ ಬಂದೂಕುಧಾರಿಯೊಬ್ಬ ಗುಂಡಿನ ದಾಳಿ ನಡೆಸಿದ್ದರಿಂದ ಕನಿಷ್ಠ ಏಳು ಶಿಕ್ಷಕರು ಸಾವನ್ನಪ್ಪಿದ್ದಾರೆ. ಬಂದೂಕುಧಾರಿಯು ಶಾಲೆಗೆ ನುಗ್ಗಿ ನೇರವಾಗಿ ತಹಸಿಲ್ ಶಾಲೆಯ ಸಿಬ್ಬಂದಿ ಕೊಠಡಿಗೆ ತೆರಳಿ ಮನಬಂದಂತೆ ಗುಂಡಿನ ದಾಳಿ ನಡೆಸಿದ್ದಾನೆ. ಶಿಕ್ಷಕರು ಪರೀಕ್ಷೆಗೆ ಸಂಬಂಧಿಸಿದ ಕೆಲಸ ಮಾಡುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ವರದಿಗಳು ತಿಳಿಸಿವೆ.