ಬೀಜಿಂಗ್: ಚೀನಾ ಮತ್ತು ಅಮೆರಿಕದ ನಡುವಿನ ಪೈಪೋಟಿ ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ ದಕ್ಷಿಣ ಕೊರಿಯಾ ಮತ್ತು ಚೀನಾದ ಉನ್ನತ ರಾಜತಾಂತ್ರಿಕರು ಪರಸ್ಪರ ನಿಕಟ ಸಂಬಂಧಗಳನ್ನು ಅಭಿವೃದ್ಧಿಪಡಿಸಲು ಮತ್ತು ಸ್ಥಿರವಾದ ಕೈಗಾರಿಕಾ ಪೂರೈಕೆಯನ್ನ ನಿರ್ವಹಿಸಲು ಮಂಗಳವಾರ ಒಪ್ಪಂದ ಮಾಡಿಕೊಂಡರು.
ಅಮೆರಿಕದ ಮಿತ್ರರಾಷ್ಟ್ರವಾದ ದಕ್ಷಿಣ ಕೊರಿಯಾ, ವಾಷಿಂಗ್ಟನ್ ಮತ್ತು ಚೀನಾದ ನಡುವೆ ಸಮತೋಲನ ಸಾಧಿಸಲು ಹೆಣಗಾಡುತ್ತಿದೆ. ತೈವಾನ್ ಕುರಿತಾದ ಯುಎಸ್ ಮತ್ತು ಚೀನಾ ಸಂಘರ್ಷವು ಈ ಎರಡೂ ದೇಶಗಳೊಂದಿಗೆ ಸೌಹಾರ್ದಯುತ ಸಂಬಂಧಗಳನ್ನು ಬಯಸುವ ಸರ್ಕಾರಗಳಿಗೆ ತೊಡಕುಂಟು ಮಾಡಿದೆ.
ದಕ್ಷಿಣ ಕೊರಿಯಾದ ವಿದೇಶಾಂಗ ಸಚಿವ ಪಾರ್ಕ್ ಜಿನ್ ಮತ್ತು ವಾಂಗ್ ಯಿ ಅವರು ಪೂರ್ವ ಚೀನಾದ ಕಿಂಗ್ಡಾವೊ ನಗರದಲ್ಲಿ ನಡೆದ ಸಭೆಯಲ್ಲಿ ಮೂರು ದಶಕಗಳ ಯಶಸ್ವಿ ವಾಣಿಜ್ಯ ಸಂಬಂಧಗಳ ಆಧಾರದ ಮೇಲೆ ಬಾಂಧವ್ಯ ಅಭಿವೃದ್ಧಿಪಡಿಸಲು ಕರೆ ನೀಡಿದರು. ಪೂರೈಕೆ ಸರಪಳಿ ಸಮಸ್ಯೆಗಳು, ಹವಾಮಾನ ಬದಲಾವಣೆಯ ಸಹಕಾರ ಮತ್ತು ಸಾಂಸ್ಕೃತಿಕ ವಿನಿಮಯಕ್ಕೆ ಅನುಕೂಲವಾಗುವಂತೆ ಉನ್ನತ ಮಟ್ಟದ ಸಂವಹನ ಹೆಚ್ಚಿಸಲು ಉಭಯ ದೇಶಗಳು ಒಪ್ಪಿಕೊಂಡಿವೆ ಎಂದು ದಕ್ಷಿಣ ಕೊರಿಯಾ ಸಚಿವಾಲಯ ತಿಳಿಸಿದೆ.
ಇನ್ನು ಇತ್ತೀಚೆಗೆ ಚೀನಾದ ವಿರೋಧದ ನಡುವೆಯೂ ಅಮೆರಿಕ ಸಂಸತ್ನ ಸ್ಪೀಕರ್ ನ್ಯಾನ್ಸಿ ಪೆಲೋಸಿ ತೈವಾನ್ಗೆ ಭೇಟಿ ನೀಡಿದ್ದರು. ಅತ್ತ ತೈವಾನ್ಗೆ ಪೆಲೋಸಿ ಭೇಟಿ ನೀಡುತ್ತಿದ್ದಂತೆ ಇತ್ತ ಚೀನಾ ಮಿಲಿಟರಿ ಸನ್ನದ್ಧತೆಯನ್ನು ಘೋಷಿಸಿತ್ತು. ಪೆಲೋಸಿ ತೈವಾನ್ ಭೇಟಿ ಚೀನಾ - ಅಮೆರಿಕ ನಡುವಣ ಉದ್ವಿಗ್ನತೆಯನ್ನು ಹೆಚ್ಚಿಸಿದೆ. ಚೀನಾ ತೈವಾನ್ ತನ್ನ ರಾಷ್ಟ್ರದ ಭಾಗವೆಂದು ಪ್ರತಿಪಾದಿಸುತ್ತಾ ಬಂದಿದೆ.
ಇದನ್ನೂ ಓದಿ:ಪೆಲೋಸಿ ತೈವಾನ್ ಪ್ರವಾಸ ಮತ್ತು ಚೀನಾ ರಣ ನೀತಿ... ಏನಿದು ವಿವಾದ?