ಇಂಗ್ಲೆಂಡ್:ಬ್ರಿಟನ್-ಭಾರತ ಯುವ ವೃತ್ತಿಪರರ ಯೋಜನೆಯಡಿ ಭಾರತೀಯರಿಗೆ ವಿಶೇಷ ವೀಸಾ ನೀಡುವ ಎರಡನೇ ಪ್ರಕ್ರಿಯೆ ಮಂಗಳವಾರ (25/07/2023) ಆರಂಭವಾಗಿದ್ದು ಜುಲೈ 27ರ (ಇಂದು) ಮಧ್ಯಾಹ್ನ 1.30ಕ್ಕೆ ಮುಕ್ತಾಯವಾಗಲಿದೆ. ವೀಸಾ ನೀಡುವ ಎರಡನೇ ಹಂತವನ್ನು ಬ್ರಿಟನ್ ತೆರೆದಿದ್ದು, ಈ ಕುರಿತು ನವದೆಹಲಿಯಲ್ಲಿರುವ ಬ್ರಿಟಿಷ್ ಹೈಕಮಿಷನ್ ಕಚೇರಿ ಟ್ವೀಟ್ ಮಾಡಿದೆ. 18 ರಿಂದ 30 ವರ್ಷದೊಳಗಿನ ಭಾರತೀಯ ಪ್ರಜೆಯು ಪದವೀಧರ ಅಥವಾ ಸ್ನಾತಕೋತ್ತರ ಪದವಿ ಅರ್ಹತೆ ಹೊಂದಿರುವ ಭಾರತೀಯ ಯುವ ವೃತ್ತಿಪರರ ಯೋಜನೆ ವೀಸಾಕ್ಕೆ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದೆ.
ಈ ವೀಸಾದ ಮೂಲಕ, ಇಂಗ್ಲೆಂಡ್ನಲ್ಲಿ ಎರಡು ವರ್ಷಗಳ ಕಾಲ ವಾಸಿಸಲು, ಉದ್ಯೋಗ ಹೊಂದಲು ಅಥವಾ ಅಧ್ಯಯನ ಕೈಗೊಳ್ಳಲು ಭಾರತೀಯರಿಗೆ ಅವಕಾಶ ಸಿಗಲಿದೆ. ಯುಕೆ ಮತ್ತು ಭಾರತದ ನಡುವಿನ ಜಂಟಿ ಯೋಜನೆಯನ್ನು ಈ ವರ್ಷದ ಫೆಬ್ರವರಿಯಲ್ಲಿ ಔಪಚಾರಿಕವಾಗಿ ಪ್ರಾರಂಭಿಸಲಾಯಿತು.
ಇದಕ್ಕೂ ಮೊದಲು 2022 ನವೆಂಬರ್ನಲ್ಲಿ ಇಂಡೊನೇಷ್ಯಾದಲ್ಲಿ ನಡೆದಿದ್ದ ಜಿ 20 ಶೃಂಗಸಭೆಯಲ್ಲಿ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ಈ ಸಂಬಂಧ ಒಪ್ಪಂದಕ್ಕೆ ಸಹಿ ಹಾಕಿದ್ದರು. ಒಪ್ಪಂದದ ಪ್ರಕಾರ, ಬ್ರಿಟಿಷ್ ಪ್ರಜೆಗಳಿಗೂ ಕೂಡ ಭಾರತದಲ್ಲಿ ವಾಸಿಸಲು ಮತ್ತು ಕೆಲಸ ಮಾಡಲು ಇದೇ ರೀತಿಯ ವೀಸಾಗಳನ್ನು ನೀಡಲಾಗುತ್ತದೆ.
ಬ್ರಿಟನ್ ಇಂಡೋ ಫೆಸಿಫಿಕ್ ಪ್ರದೇಶದ ಇತರ ರಾಷ್ಟ್ರಗಳಿಗಿಂತ ಭಾರತದೊಂದಿಗೆ ಹೆಚ್ಚು ಸಂಪರ್ಕಿತದಲ್ಲಿದೆ. ಬ್ರಿಟನ್ನಲ್ಲಿರುವ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳಲ್ಲಿ ಕಾಲು ಭಾಗದಷ್ಟು ಜನ ಭಾರತೀಯರು. ಬ್ರಿಟನ್ ಬೆಂಬಲಿತ 95 ಸಾವಿರ ಉದ್ಯೋಗದಲ್ಲಿ ಭಾರತೀಯರ ಬಂಡವಾಳವೂ ಹೆಚ್ಚಿದೆ.