ಬೋಸ್ಟನ್, ಅಮೆರಿಕ: ಅಟ್ಲಾಂಟಿಕ್ ಸಾಗರದಲ್ಲಿ ನಾಪತ್ತೆಯಾದ ಮಿನಿ ಜಲಾಂತರ್ಗಾಮಿ ಶೋಧ ಕಾರ್ಯಾಚರಣೆಯಲ್ಲಿ ನಿರ್ಣಾಯಕ ಹೆಜ್ಜೆ ಇಟ್ಟಿದೆ. ಕೆನಡಾದ ಗಸ್ತು ವಿಮಾನ P-3 ನೀರೊಳಗಿನ ಶಬ್ದಗಳನ್ನು ಪತ್ತೆ ಮಾಡಿದೆ ಎಂದು ಅಮೆರಿಕನ್ ಕೋಸ್ಟ್ ಗಾರ್ಡ್ ಹೇಳಿದೆ. ವಿಮಾನದ ಸೋನಾರ್ ಸಿಸ್ಟಮ್ ಶಬ್ದಗಳನ್ನು ಪತ್ತೆಹಚ್ಚಿದ ನಂತರ ಅಧಿಕಾರಿಗಳು ಶೋಧ ಕಾರ್ಯಾಚರಣೆಯನ್ನು ಸ್ಥಳಾಂತರಿಸಿದರು. ಗುರುವಾರ ಬೆಳಗಿನ ವೇಳೆಗೆ ಮಾತ್ರ ಜಲಾಂತರ್ಗಾಮಿ ನೌಕೆಯಲ್ಲಿ ಸಾಕಷ್ಟು ಆಮ್ಲಜನಕವಿದೆ ಎಂದು ತೋರುತ್ತದೆ. ಇದರಿಂದಾಗಿ ಜಲಾಂತರ್ಗಾಮಿ ನೌಕೆಗಾಗಿ ರಕ್ಷಣಾ ಪಡೆಗಳು ನಿರಂತರ ಹುಡುಕಾಟ ನಡೆಸುತ್ತಿವೆ.
ನಡೆದಿದ್ದೇನು? : ಬಿಲಿಯನೇರ್‌ಗಳಾದ ಹಮೀಶ್ ಹಾರ್ಡಿಂಗ್, ಬ್ರಿಟಿಷ್-ಪಾಕಿಸ್ತಾನದ ಬಿಲಿಯನೇರ್ ಶಹಜಾದಾ ದಾವೂದ್ (48) ಮತ್ತು ಅವರ ಮಗ ಸುಲೇಮಾನ್ (19) ಇತರ ಇಬ್ಬರೊಂದಿಗೆ 8 ದಿನಗಳ ಸಾಹಸದ ಭಾಗವಾಗಿ ಟೈಟಾನಿಕ್ ಅವಶೇಷಗಳನ್ನು ನೋಡಲು ಸಮುದ್ರದ ತಳಕ್ಕೆ ತೆರಳಿದರು. ಭಾನುವಾರ ಬೆಳಗ್ಗೆ 6 ಗಂಟೆಗೆ ಸಾಗರವನ್ನು ಪ್ರವೇಶಿಸಿದ ಒಂದು ಗಂಟೆ 45 ನಿಮಿಷಗಳಲ್ಲಿ ಕಿರು ಜಲಾಂತರ್ಗಾಮಿ ಸಂಪರ್ಕ ಕಡಿತಗೊಂಡಿದೆ. ಅಮೆರಿಕ ಮತ್ತು ಕೆನಡಾ ಗಸ್ತು ವಿಮಾನಗಳು ಮತ್ತು ಹಡಗುಗಳು ಕಿರು ಜಲಾಂತರ್ಗಾಮಿಯನ್ನು ಹುಡುಕಲು ನಿಯೋಜಿಸಿದವು. ಮುಳುಗಿದ ಜಲಾಂತರ್ಗಾಮಿ ನೌಕೆಯು ಒಟ್ಟು 96 ಗಂಟೆಗಳ ಕಾಲ ಸಾಕಷ್ಟು ಆಮ್ಲಜನಕವನ್ನು ಹೊಂದಿತ್ತು. ಜಲಾಂತರ್ಗಾಮಿ ನೌಕೆಯು 10,432 ಕೆಜಿ ತೂಗುತ್ತದೆ ಮತ್ತು 4,000 ಮೀಟರ್ ಆಳಕ್ಕೆ ಹೋಗಬಹುದು.
ಸುರಕ್ಷಿತವಾಗಿ ವಾಪಸ್ ಬರಲಿ: ಬ್ರಿಟಿಷ್-ಪಾಕಿಸ್ತಾನದ ಬಿಲಿಯನೇರ್ ಶಹಜಾದಾ ದಾವೂದ್ ಅವರ ಹಿತೈಷಿಗಳು ಮತ್ತು ಸ್ನೇಹಿತರು ಅವರ ಸುರಕ್ಷತೆಗಾಗಿ ಹಾಗೂ ಸುರಕ್ಷತವಾಗಿ ವಾಪಸ್ ಬರಲೆಂದು ಪ್ರಾರ್ಥಿಸಿದ್ದಾರೆ. ಶಹಜಾದಾ ಅವರು ಪಾಕಿಸ್ತಾನದ ಅತಿದೊಡ್ಡ ಕಂಪನಿಯಾದ ಇಂಗ್ರೋ ಕಾರ್ಪೊರೇಶನ್‌ನ ಉಪಾಧ್ಯಕ್ಷರಾಗಿದ್ದಾರೆ. ಕಂಪನಿಯು ಪಾಕಿಸ್ತಾನದಲ್ಲಿ ರಸಗೊಬ್ಬರಗಳು, ವಾಹನಗಳು, ಇಂಧನ ಮತ್ತು ಡಿಜಿಟಲ್ ತಂತ್ರಜ್ಞಾನದಲ್ಲಿ ಹೆಚ್ಚು ಹೂಡಿಕೆ ಮಾಡಿದೆ.