ಲಾಸ್ ವೇಗಾಸ್ (ಅಮೆರಿಕ):ಅಮೆರಿಕದಲ್ಲಿ ಮತ್ತೆ ಗುಂಡಿನ ಮೊರೆತ ಕೇಳಿ ಬಂದಿದೆ. ಲಾಸ್ ವೇಗಾಸ್ನ ನೆವಾಡಾ ವಿಶ್ವವಿದ್ಯಾಲಯದಲ್ಲಿ ಅಪರಿಚಿತ ವ್ಯಕ್ತಿ ನಡೆಸಿದ ದಾಳಿಯಲ್ಲಿ ಮೂವರು ಸಾವನ್ನಪ್ಪಿ, ಒಬ್ಬ ಗಂಭೀರ ಗಾಯಗೊಂಡಿದ್ದಾನೆ. ಪ್ರತಿದಾಳಿಯಲ್ಲಿ ಆಗಂತುಕನು ಕೂಡ ಹತ್ಯೆಯಾಗಿದ್ದಾನೆ.
ಬುಧವಾರ 44 ಗಂಟೆ ಸುಮಾರಿನಲ್ಲಿ ವಿವಿ ಕ್ಯಾಂಪಸ್ನಲ್ಲಿ ಬಂದೂಕುಧಾರಿ ವ್ಯಕ್ತಿ ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾನೆ. ಇದರಿಂದ ಸ್ಥಳದಲ್ಲೇ ಮೂವರು ಸಾವಿಗೀಡಾಗಿದ್ದಾರೆ. ಬಳಿಕ ಶೂಟರ್ ಮೇಲೆ ನಡೆದ ಪ್ರತಿದಾಳಿಯಲ್ಲಿ ಆತನು ಕೂಡ ಪ್ರಾಣ ಕಳೆದುಕೊಂಡಿದ್ದಾರೆ. ಮೂರು ಶವಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಗುಂಡಿನ ದಾಳಿಯ ನಂತರ ಲಾಸ್ ವೇಗಾಸ್‌ನಲ್ಲಿನ ಅಧಿಕಾರಿಗಳು ನೆವಾಡಾ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿರುವ ಕಟ್ಟಡಗಳಲ್ಲಿನ ಜನರನ್ನು ತೆರವು ಮಾಡಿಸಿದರು. ದಾಳಿಯಲ್ಲಿ ಬೇರೆ ಯಾರಾದರೂ ಉಳಿದುಕೊಂಡಿದ್ದಾರಾ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳ ನಡುವೆ ಚಕಮಕಿ ಶಂಕೆ:ವಿವಿ ಕ್ಯಾಂಪಸ್ನಲ್ಲಿ ನಡೆದಿರುವ ಗುಂಡಿನ ದಾಳಿಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿರುವ ಶಂಕೆ ವ್ಯಕ್ತವಾಗಿದೆ. ವಿದ್ಯಾರ್ಥಿಗಳೇ ಪರಸ್ಪರ ದಾಳಿ ಮಾಡಿಕೊಂಡಿರುವ ಬಗ್ಗೆ ಮಾಹಿತಿ ಸಿಗುತ್ತಿದೆ. ಇನ್ನು, ಪ್ರತ್ಯಕ್ಷದರ್ಶಿ ವಿದ್ಯಾರ್ಥಿಯೊಬ್ಬ ಘಟನೆಯ ಬಗ್ಗೆ ಮಾಹಿತಿ ನೀಡಿದ್ದು, ಬೆಳಗ್ಗೆ 11 ಗಂಟೆ ಸುಮಾರಿನಲ್ಲಿ ಉಪಾಹಾರ ಮಾಡುತ್ತಿದ್ದಾಗ ದಿಢೀರ್ ಗುಂಡಿನ ದಾಳಿ ಕೇಳಿಸಿತು. ಹೊರಗೋಡಿ ಬಂದು ವೀಕ್ಷಿಸಿದಾಗ ಬಂದೂಕುಧಾರಿ ವ್ಯಕ್ತಿ ಗುಂಡು ಹಾರಿಸುತ್ತಿದ್ದ. ಬಳಿಕ ನಾನು ಕೆಳಮಹಡಿಗೆ ಓಡಿ ಹೋದೆ ಎಂದು ತಿಳಿಸಿದ್ದಾನೆ.