ಕಠ್ಮಂಡು, ನೇಪಾಳ:ನೇಪಾಳದಲ್ಲಿ ಎರಡು ಗಂಟೆಗಳ ಅಂತರಲ್ಲಿ ಭೂಮಿ ಮೂರು ಬಾರಿ ಕಂಪಿಸಿದೆ. ರಿಕ್ಟರ್ ಮಾಪಕದಲ್ಲಿ 4.4, 5.0 ಮತ್ತು 3.6 ತೀವ್ರತೆಯ ಭೂಕಂಪನ ದಾಖಲಾಗಿದೆ. ಬಜುರಾದ ದಹಕೋಟ್‌ನಲ್ಲಿ ಭೂಕಂಪನಗಳ ಕೇಂದ್ರ ಬಿಂದುಗಳು ಪತ್ತೆಯಾಗಿವೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ಮಾಹಿತಿ ನೀಡಿದೆ.
ಹೌದು, ಕಳೆದ ರಾತ್ರಿ 11.43 ಗಂಟೆಗೆ 4.4 ತೀವ್ರತೆಯ ಭೂಕಂಪ ಮೊದಲು ಅಪ್ಪಳಿಸಿತು. ಬಳಿಕ ರಾತ್ರಿ 1.15 ಗಂಟೆಗೆ (ಇಂದು ನಸುಕಿನ ಜಾವ) 5.0 ತೀವ್ರತೆಯ ಭೂಕಂಪನ ಸಂಭವಿಸಿತು. ಇದಾದ 21 ನಿಮಿಷದ ಬಳಿಕ ಅಂದ್ರೆ ರಾತ್ರಿ 1.36 ಗಂಟೆಗೆ 3.6 ತೀವ್ರತೆಯಲ್ಲಿ ಭೂಮಿ ಕಂಪಿಸಿತು. ಈ ಬಗ್ಗೆ ನೇಪಾಳದ ಸುರ್ಖೆತ್ ಜಿಲ್ಲೆಯ ಭೂಕಂಪನ ಕೇಂದ್ರದ ಅಧಿಕಾರಿ ರಾಜೇಶ್ ಶರ್ಮಾ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ. ಆದ್ರೆ ಇದುವರೆಗೆ ಯಾವುದೇ ಸಾವು-ನೋವಿನ ಬಗ್ಗೆ ವರದಿಯಾಗಿಲ್ಲ.
ಎರಡೆರಡು ಪ್ರಬಲ ಭೂಕಂಪಕ್ಕೆ ತತ್ತರಿಸಿದ ನ್ಯೂಜಿಲೆಂಡ್: ನ್ಯೂಜಿಲೆಂಡ್ನಲ್ಲಿ ಇತ್ತಿಚೇಗೆ ಎರಡೆರಡು ಪ್ರಬಲ ಭೂಕಂಪ ಸಂಭವಿಸಿದ್ದವು. ಭೂಕಂಪನದ ರಾಷ್ಟ್ರೀಯ ಕೇಂದ್ರದ ಪ್ರಕಾರ, ಭೂಕಂಪದ ತೀವ್ರತೆಯನ್ನು ರಿಕ್ಟರ್ ಮಾಪಕದಲ್ಲಿ 7.2 ಎಂದು ಅಳೆಯಲಾಗಿತ್ತು. ಭಾರತೀಯ ಕಾಲಮಾನದ ಪ್ರಕಾರ ಸೋಮವಾರ ಬೆಳಗ್ಗೆ 6.11ಕ್ಕೆ ಭೂಕಂಪನದ ಅನುಭವವಾಗಿತು. ಈ ಭೂಕಂಪನ ಬಳಿಕ ಸುಮಾರು 40 ನಿಮಿಷಗಳ ನಂತರ, ಅಂದರೆ 6:53ಕ್ಕೆ, ಕೆರ್ಮಾಡೆಕ್ ದ್ವೀಪದಲ್ಲಿ ಮತ್ತೆ ಭೂಕಂಪ ಸಂಭವಿಸಿತ್ತು. ಈ ಭೂಕಂಪದ ತೀವ್ರತೆಯನ್ನು ರಿಕ್ಟರ್ ಮಾಪಕದಲ್ಲಿ 5.4 ಎಂದು ಅಳೆಯಲಾಗಿತ್ತು. ಕೆರ್ಮಾಡೆಕ್ ದ್ವೀಪ ಪ್ರದೇಶದಲ್ಲಿ ಸಂಭವಿಸಿದ ಭೂಕಂಪವು ಸುಮಾರು 10 ಕಿ.ಮೀ ಆಳದಲ್ಲಿ ನಡೆದಿದೆ ಎಂದು ಹೇಳಲಾಗಿತ್ತು. ಭೂಕಂಪನದಿಂದ ನ್ಯೂಜಿಲೆಂಡ್‌ಗೆ ಯಾವುದೇ ಸುನಾಮಿ ಭಯವಿಲ್ಲ ಎಂದು ಅಧಿಕಾರಿಗಳು ಹೇಳಿದ್ದರು.