ವಾಷಿಂಗ್ಟನ್(ಅಮೆರಿಕ):ಸುಂಟರಗಾಳಿ, ಆಲಿಕಲ್ಲು ಮತ್ತು ಮಿಂಚು ಸೇರಿದಂತೆ ಭಾರಿ ಪ್ರಮಾಣದ ಚಂಡಮಾರುತದ ಮುನ್ಸೂಚನೆ ಹಿನ್ನೆಲೆಯಲ್ಲಿ ವಾಷಿಂಗ್ಟನ್ ಡಿಸಿ ಪ್ರದೇಶದಲ್ಲಿ ಮುನ್ನೆಚ್ಚರಿಕೆ ಘೋಷಿಸಲಾಗಿದೆ. ಅಷ್ಟೇ ಅಲ್ಲ ಅಮೆರಿಕದಿಂದ ಹಾರಬೇಕಿದ್ದ ಸಾವಿರಾರು ವಿಮಾನಗಳ ಹಾರಾಟವನ್ನು ಸಹ ರದ್ದು ಮಾಡಲಾಗಿದೆ.
ಪ್ರಬಲವಾದ ಚಂಡಮಾರುತದ ಹಿನ್ನೆಲೆಯಲ್ಲಿ ನಿವಾಸಿಗಳು ಮನೆಯೊಳಗೆ ಸುರಕ್ಷಿತವಾಗಿ ಉಳಿಯುವಂತೆ, ಹಾಗೂ ಹೊರ ಬರದಂತೆ ಅಲ್ಲಿನ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ವಾಷಿಂಗ್ಟನ್ ಪ್ರದೇಶದಲ್ಲಿ ಸಂಜೆ 5 ಗಂಟೆಯ ನಂತರ ಧಾರಾಕಾರ ಮಳೆ ಆಗುತ್ತಿದೆ. ಪರಿಣಾಮ ಇಲ್ಲಿನ ಜನ ವಿದ್ಯುತ್ ಇಲ್ಲದೇ ಕಾಲ ಕಳೆಯಬೇಕಾಯಿತು.
ಅಲ್ಲಿನ ರಾಷ್ಟ್ರೀಯ ಹವಾಮಾನ ಇಲಾಖೆ ಭಾರಿ ಸುಂಟರಗಾಳಿಯ ಮುನ್ಸೂಚನೆ ನೀಡಿದೆ. ಇದು ರಾತ್ರಿ 9ಗಂಟೆವರೆಗೆ ಹೀಗೆ ಮುಂದುವರೆಯಲಿದ್ದು ಮಂಗಳವಾರವೂ ಇರಲಿದೆ ಎಂದು ಎಚ್ಚರಿಕೆ ರವಾನಿಸಿದೆ.
ಸೋಮವಾರ ಮಧ್ಯಾಹ್ನದ ವೇಳೆಗೆ 1,300 ಕ್ಕೂ ಹೆಚ್ಚು ಅಮೆರಿಕದ ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಅಷ್ಟೇ ಅಲ್ಲ ಸುಮಾರು, 5,500ಕ್ಕೂ ಹೆಚ್ಚು ವಿಮಾನಗಳ ಹಾರಾಟದಲ್ಲಿ ವ್ಯತ್ಯಯವಾಗಿದೆ ಎಂದು ಫ್ಲೈಟ್ ಟ್ರ್ಯಾಕಿಂಗ್ ಸೇವೆ ಫ್ಲೈಟ್ಅವೇರ್ ಸಂಸ್ಥೆ ಹೇಳಿದೆ. ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್, ದೇಶದ ಪೂರ್ವ ಕರಾವಳಿಗೆ ಹೋಗುವ ವಿಮಾನ ಹಾರಾಟಗಳನ್ನು ಮರು ಹೊಂದಿಸುವ ಕೆಲಸ ಮಾಡುತ್ತಿದೆ. ಫಿಲಡೆಲ್ಫಿಯಾ, ವಾಷಿಂಗ್ಟನ್, ಚಾರ್ಲೆಟ್ ಮತ್ತು ಅಟ್ಲಾಂಟಾದಲ್ಲಿ ಮತ್ತು ಹೊರಗೆ ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ.