ಒಟ್ಟಾವಾ(ಕೆನಡಾ): ಅಮೆರಿಕದ ನ್ಯಾಯಾಂಗ ಇಲಾಖೆ ಬುಧವಾರ ಭಾರತೀಯ ನಾಗರಿಕರೊಬ್ಬರ ವಿರುದ್ಧ ಗಂಭೀರ ಆರೋಪ ಮಾಡಿದ ಬೆನ್ನಲ್ಲೇ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಕೂಡ ಭಾರತಕ್ಕೆ ಸಲಹೆ ನೀಡಿದ್ದಾರೆ. ನಾವು ಮೊದಲಿನಿಂದಲೂ ಅಮೆರಿಕ ಮಾಡಿರುವ ಆರೋಪಗಳ ಬಗ್ಗೆ ಮಾತನಾಡುತ್ತಲೇ ಬಂದಿದ್ದೇವೆ ಎಂದು ಟ್ರುಡೊ ಹೇಳಿದ್ದಾರೆ. ಭಾರತ ಇಂತಹ ಆರೋಪಗಳನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ನಾವು ಈಗಾಗಲೇ ಹೇಳುತ್ತಲೇ ಬಂದಿದ್ದೇವೆ ಎಂದಿದ್ದಾರೆ.
ಎರಡು ತಿಂಗಳ ಹಿಂದೆ ಸೆಪ್ಟೆಂಬರ್‌ನಲ್ಲಿ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ಕೆನಡಾ ಸಂಸತ್ತಿನಲ್ಲಿ ಮಾತನಾಡುತ್ತಾ, ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ನಿಜ್ಜಾರ್ ಹತ್ಯೆಯಲ್ಲಿ ಭಾರತ ಸರ್ಕಾರದ ಕೈವಾಡವಿದೆ ಎಂದು ಆರೋಪಿಸಿರುವಾಗಲೇ ಅಮೆರಿಕ ಭಾರತದ ಮೇಲೆ ಈ ಆರೋಪ ಮಾಡಿದೆ.
ಆರೋಪಗಳನ್ನು ಗಂಭೀರವಾಗಿ ಪರಿಗಣಿಸಬೇಕು:ಕೆನಡಾದ ಒಟ್ಟಾವಾದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಧಾನಿ, ಭಾರತದ ಸರ್ಕಾರಿ ಅಧಿಕಾರಿಯೊಬ್ಬರು ಅಮೆರಿಕದ ನೆಲದಲ್ಲಿ ಖಲಿಸ್ತಾನಿ ನಾಯಕನನ್ನು ಹತ್ಯೆ ಮಾಡಲು ವಿಫಲ ಸಂಚು ರೂಪಿಸಿದ್ದಾರೆ ಎಂದು ಅಮೆರಿಕ ಆರೋಪಿಸಿದೆ. ಟ್ರೂಡೊ ಅವರು ಅಮೆರಿಕದಿಂದ ಬರುತ್ತಿರುವ ಸುದ್ದಿಗಳು ನಾವು ಮೊದಲಿನಿಂದಲೂ ಮಾತನಾಡುತ್ತಿರುವ ಕಡೆಗೆ ತೋರಿಸುತ್ತಿವೆ. ಭಾರತ ಇದನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ ಎಂದು ಹೇಳಿದರು.
ಅಮೆರಿಕ ಆರೋಪ ಮಾಡಿದ್ದೇನು?: ಸಿಖ್ ಪ್ರತ್ಯೇಕತಾವಾದಿಯನ್ನು ಕೊಲ್ಲಲು ಸಂಚು ರೂಪಿಸಿದ ಆರೋಪವನ್ನು ಅಮೆರಿಕವು ಭಾರತೀಯ ವ್ಯಕ್ತಿಯ ಮೇಲೆ ಹೊರಿಸಿದೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ಶ್ವೇತಭವನದ ರಾಷ್ಟ್ರೀಯ ಭದ್ರತಾ ಮಂಡಳಿಯ ವಕ್ತಾರ ಜಾನ್ ಕಿರ್ಬಿ ಗುರುವಾರ ಹೇಳಿದ್ದಾರೆ. ಮತ್ತೊಂದೆಡೆ, ಭಾರತದೊಂದಿಗೆ ಕಾರ್ಯತಂತ್ರದ ಪಾಲುದಾರಿಕೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಪ್ರಯತ್ನಗಳನ್ನು ಮುಂದುವರಿಸಲಾಗುವುದು ಎಂದು ಅವರು ಹೇಳಿದರು.
ಭಾರತ ನಮಗೆ ಕಾರ್ಯತಂತ್ರದ ಪಾಲುದಾರನಾಗಿ ಮುಂದುವರಿಯುತ್ತದೆ. ನಮ್ಮ ಕ್ರಮಗಳು ಆ ಪಾಲುದಾರಿಕೆಯನ್ನು ಬಲಪಡಿಸುವ ಗುರಿಯನ್ನು ಹೊಂದಿವೆ. ಅಲ್ಲದೇ ಅಮೆರಿಕದಲ್ಲಿ ನಡೆದ ಕೊಲೆ ಸಂಚು ಹಾಗೂ ಆ ಪ್ರಕರಣದ ತನಿಖೆಯನ್ನು ಗಂಭೀರವಾಗಿ ಪರಿಗಣಿಸುತ್ತೇವೆ. ಭಾರತವೂ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುತ್ತಿರುವುದು ನಮಗೆ ಸಂತಸ ತಂದಿದೆ ಎಂದರು.
ಸಿಖ್ ಪ್ರತ್ಯೇಕತಾವಾದಿಯ ಹತ್ಯೆಗೆ ಸಂಚು ರೂಪಿಸಿದ್ದ ಭಾರತೀಯ ವ್ಯಕ್ತಿಯ ಮೇಲೆ ಅಮೆರಿಕದ ದೋಷಾರೋಪಣೆ ಕುರಿತು ಭಾರತ ಗುರುವಾರ ತನ್ನ ಕಳವಳ ವ್ಯಕ್ತಪಡಿಸಿದೆ. ಈ ಪ್ರಕರಣದಲ್ಲಿ ಉನ್ನತ ಮಟ್ಟದ ಸಮಿತಿ ರಚಿಸಿ ವಿಚಾರಣೆ ನಡೆಸಲಾಗುವುದು ಎಂದು ಪ್ರಕಟಿಸಿದೆ. ಭಾರತೀಯ ಅಧಿಕಾರಿಯೊಬ್ಬರು ಭಾಗಿಯಾಗಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದರು.
ಈ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕನ್ ಉತ್ತರಿಸಿದರು. ಪ್ರಸ್ತುತ ನ್ಯಾಯಾಲಯದ ವ್ಯಾಪ್ತಿಗೆ ಒಳಪಟ್ಟಿದೆ. ಅದರ ಬಗ್ಗೆ ಹೆಚ್ಚು ಮಾತನಾಡಲಾರೆ. ಅಲ್ಲದೆ ನಾವು ಈಗಾಗಲೇ ಈ ಪ್ರಕರಣವನ್ನು ನೇರವಾಗಿ ನವದೆಹಲಿಗೆ ತಿಳಿಸಿದ್ದೇವೆ. ಅಲ್ಲಿನ ಸರ್ಕಾರ ತನಿಖೆಗೆ ಆದೇಶಿಸಿರುವುದು ಒಳ್ಳೆಯ ಬೆಳವಣಿಗೆ ಎಂದು ಹೇಳಿದ್ದಾರೆ.
ಕೆನಡಾದ ಆರೋಪವೇನು?:ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತದ ಕೈವಾಡದ ಬಗ್ಗೆ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಸೆಪ್ಟೆಂಬರ್‌ನಲ್ಲಿ ಕೆನಡಾದ ಸಂಸತ್ತಿನ ಹೌಸ್ ಆಫ್ ಕಾಮನ್ಸ್‌ನಲ್ಲಿ ಮಾತನಾಡಿದ್ದರು. ಭಾರತ ಸರ್ಕಾರ ಮತ್ತು ಕೆನಡಾದ ಪ್ರಜೆ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ನಡುವಿನ ಸಂಬಂಧದ ಆರೋಪಗಳನ್ನು ಕೆನಡಾದ ಭದ್ರತಾ ಸಂಸ್ಥೆಗಳು ಸಕ್ರಿಯವಾಗಿ ತನಿಖೆ ನಡೆಸುತ್ತಿವೆ ಎಂದು ಅವರು ಹೇಳಿದ್ದರು. ಕೆನಡಾದ ನೆಲದಲ್ಲಿ ಕೆನಡಾದ ಪ್ರಜೆಯ ಹತ್ಯೆಯಲ್ಲಿ ಯಾವುದೇ ವಿದೇಶಿ ಸರ್ಕಾರದ ಪಾಲ್ಗೊಳ್ಳುವಿಕೆಯನ್ನು ಸಹಿಸಲಾಗುವುದಿಲ್ಲ. ಇದು ನಮ್ಮ ಸಾರ್ವಭೌಮತ್ವದ ಉಲ್ಲಂಘನೆಯಾಗಿದೆ. ಇದು ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ ಎಂದು ಪ್ರಧಾನಿ ಹೇಳಿದ್ದರು.
ಇದನ್ನೂ ಓದಿ:ವಿಶ್ವ ಹವಾಮಾನ ಶೃಂಗಸಭೆ: ದುಬೈಗೆ ಆಗಮಿಸಿದ ಮೋದಿ, ಅದ್ಧೂರಿ ಸ್ವಾಗತ