ಇಸ್ಲಾಮಾಬಾದ್ : ಹಲವಾರು ಪ್ರಕರಣಗಳಲ್ಲಿ ಬಂಧನ ಪೂರ್ವ ಜಾಮೀನು ಪಡೆಯಲು ಮಂಗಳವಾರ ಇಸ್ಲಾಮಾಬಾದ್ ನ್ಯಾಯಾಲಯಕ್ಕೆ ಹಾಜರಾಗುವ ಸಮಯದಲ್ಲಿ ತಮ್ಮನ್ನು ಮತ್ತೆ ಬಂಧಿಸುವ ಎಲ್ಲಾ ಸಾಧ್ಯತೆಗಳಿವೆ ಎಂದು ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಆರೋಪಿಸಿದ್ದಾರೆ. ಆಡಳಿತಾರೂಢ ಪಿಡಿಎಂ ಮೈತ್ರಿಕೂಟವು ಸೇನೆಯೊಂದಿಗೆ ಒಳ ಒಪ್ಪಂದ ಮಾಡಿಕೊಂಡಿದ್ದು, ತಮ್ಮನ್ನು ಅಧಿಕಾರದಿಂದ ದೂರವಿಡಲು ದೇಶದ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ನಾಶಪಡಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಸದ್ಯ ತಮ್ಮ ಪಿಟಿಐ ಪಕ್ಷದ 10 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರನ್ನು ಬಂಧಿಸಲಾಗಿದ್ದು, ಪಕ್ಷದ ಎಲ್ಲ ಹಿರಿಯ ನಾಯಕರನ್ನು ಸಹ ಜೈಲಿನಲ್ಲಿಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ನನ್ನನ್ನು ಬಂಧಿಸಿದ ನಂತರ ದೇಶದಲ್ಲಿ ಉಂಟಾದ ಗಲಭೆ ಹಿಂಸಾಚಾರಗಳನ್ನು ನೆಪ ಮಾಡಿಕೊಂಡು ನಮ್ಮ ಪಕ್ಷವನ್ನು ಹಾಳು ಮಾಡಲು ಅವರು ಪ್ರಯತ್ನಿಸುತ್ತಿದ್ದಾರೆ. ಈಗ ಅವರು ನಮ್ಮನ್ನು ಮಿಲಿಟರಿ ನ್ಯಾಯಾಲಯಗಳಲ್ಲಿ ವಿಚಾರಣೆ ಮಾಡಲು ಬಯಸುತ್ತಿದ್ದಾರೆ. ಪ್ರಸ್ತುತ ಆಡಳಿತದಲ್ಲಿರುವ ಸರ್ಕಾರಕ್ಕೆ ಚುನಾವಣೆಯಲ್ಲಿ ಸೋಲುವ ಭಯವಿರುವುದರಿಂದ ಅವರು ನಮ್ಮನ್ನು ನಾಶ ಮಾಡಲು ಪ್ರಯತ್ನಿಸುತ್ತಿದ್ದಾರೆ. ಈ ಹಿಂದೆ ಪಂಜಾಬ್ ಗವರ್ನರ್ರನ್ನು ಕೊಲೆ ಮಾಡಿದ ರೀತಿಯಲ್ಲಿಯೇ ಇಸ್ಲಾಮಿಕ್ ಮೂಲಭೂತವಾದಿಯೊಬ್ಬನಿಂದ ನನ್ನನ್ನು ಕೊಲೆ ಮಾಡಿಸುವ ಸಾಧ್ಯತೆಗಳಿವೆ ಎಂದು ಇಮ್ರಾನ್ ಗಂಭೀರವಾಗಿ ಆರೋಪಿಸಿದರು.
ಈಗಿನ ಪರಿಸ್ಥಿತಿಯನ್ನು ನೋಡಿದರೆ ಅವರು ಅಕ್ಟೋಬರ್ನಲ್ಲಿ ಕೂಡ ಚುನಾವಣೆಗಳನ್ನು ನಡೆಸುವ ಸಾಧ್ಯತೆಗಳಿಲ್ಲ. ಪಿಟಿಐ ಗೆಲ್ಲುವುದಿಲ್ಲ ಎಂಬ ವಿಶ್ವಾಸ ಎಲ್ಲಿಯವರೆಗೆ ಅವರಿಗೆ ಬರುವುದಿಲ್ಲವೋ ಅಲ್ಲಿಯವರೆಗೆ ಅವರು ಚುನಾವಣೆಗಳನ್ನು ನಡೆಸಲಾರರು. ದೇಶದಲ್ಲಿ ಪರಿಸ್ಥಿತಿ ಎಷ್ಟು ಹದಗೆಟ್ಟಿದೆ ಎಂದರೆ ನ್ಯಾಯಾಧೀಶರು ಹಾಗೂ ನ್ಯಾಯಾಲಯಗಳ ಆದೇಶಗಳನ್ನು ಸಹ ಕಡೆಗಣಿಸಲಾಗುತ್ತಿದೆ ಎಂದು ಅವರು ತಿಳಿಸಿದರು.