ಯುನೈಟೆಡ್ ಕಿಂಗ್‌ಡಮ್(ಯುಕೆ): ಯುಕೆಯ ಎಸೆಕ್ಸ್‌ನಲ್ಲಿರುವ ಬುಲ್ಫಾನ್ ಕೈಗಾರಿಕಾ ಎಸ್ಟೇಟ್‌ನಿಂದ ಪೋರ್ಷೆಸ್ ಮತ್ತು ಏರಿಯಲ್ ಆಟಮ್ ಸೇರಿದಂತೆ 700,000 ಪೌಂಡ್ಸ್ ಮೌಲ್ಯದ (ಭಾರತೀಯ ರೂಪಾಯಿ ದರದಲ್ಲಿ ಕೋಟಿಗಟ್ಟಲೆ) ಐದು ಐಷಾರಾಮಿ ಮತ್ತು ಅಪರೂಪದ ಕಾರುಗಳು ನವೆಂಬರ್ 11 ರಂದು ಕಳ್ಳತನವಾಗಿವೆ. ದರೋಡೆಕೋರರು ಕಾರುಗಳನ್ನು ಅತ್ಯಂತ ಸುಲಭವಾಗಿ ಕಳ್ಳತನ ಮಾಡಿರುವ ಸಂಪೂರ್ಣ ದೃಶ್ಯಗಳು ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿವೆ. ಈ ವಿಡಿಯೋವನ್ನು ಎಸೆಕ್ಸ್ ಪೊಲೀಸ್ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಒಂದೂವರೆ ನಿಮಿಷವಿರುವ ವಿಡಿಯೋದಲ್ಲಿ ಕಳ್ಳರು ಕೇವಲ 60 ಸೆಕೆಂಡ್ಗಳಿಗಿಂತಲೂ ಕಡಿಮೆ ಅವಧಿಯಲ್ಲಿ ದುಬಾರಿ ಕಾರುಗಳನ್ನು ಕದ್ದೊಯ್ದಿದ್ದಾರೆ. ಕಾರು ಕದ್ದೊಯ್ಯುವಾಗ ಇಬ್ಬರು ವ್ಯಕ್ತಿಗಳು ಗೇಟ್ ತೆರೆಯುತ್ತಿರುವುದನ್ನೂ ವಿಡಿಯೋದಲ್ಲಿ ನೋಡಬಹುದು. 'ನ.11 ರಂದು ಬಲ್ಫಾನ್‌ನ ಬ್ರೆಂಟ್‌ವುಡ್ ರಸ್ತೆಯಲ್ಲಿರುವ ಘಟಕದಿಂದ ಬಹು ಐಷಾರಾಮಿ ಕಾರುಗಳನ್ನು ಕಳವು ಮಾಡಿದ ಘಟನೆಯ ಕುರಿತು ನಾವು ತನಿಖೆ ನಡೆಸುತ್ತಿದ್ದೇವೆ' ಎಂಬ ಶೀರ್ಷಿಕೆಯೊಂದಿಗೆ ಪೊಲೀಸರು ವಿಡಿಯೋ ಪೋಸ್ಟ್ ಮಾಡಿದ್ದಾರೆ.