ನವದೆಹಲಿ: ಜಾಗತಿಕ ಹಣಕಾಸು ಶೃಂಗಸಭೆಯಲ್ಲಿ ಭಾಗವಹಿಸಲು ಪ್ಯಾರಿಸ್‌ಗೆ ಬಂದಿರುವ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಅವರು ಮಹಿಳಾ ಪ್ರೋಟೋಕಾಲ್ ಅಧಿಕಾರಿಯೊಬ್ಬರ ಕೈಯಿಂದ ಛತ್ರಿಯನ್ನು ಬಲವಂತವಾಗಿ ಕಿತ್ತುಕೊಂಡ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. 45 ಸೆಕೆಂಡುಗಳ ವಿಡಿಯೋದಲ್ಲಿ, ಬೂದು ಬಣ್ಣದ ಸೂಟ್ ಧರಿಸಿರುವ ಷರೀಫ್, ಮಹಿಳಾ ಅಧಿಕಾರಿ ಹಿಡಿದಿರುವ ಛತ್ರಿಯನ್ನು ಕಿತ್ತುಕೊಳ್ಳಲು ಪ್ರಯತ್ನಿಸುತ್ತಿರುವುದು ಕಾಣಿಸುತ್ತದೆ. ಕೆಲ ಸೆಕೆಂಡುಗಳ ನಂತರ ಛತ್ರಿ ಕಿತ್ತುಕೊಂಡು ಷರೀಫ್ ತಾವೊಬ್ಬರೇ ಛತ್ರಿ ಹಿಡಿದುಕೊಂಡು ನಡೆಯುತ್ತಿರುವುದು ಕಾಣಿಸುತ್ತದೆ. ಆದರೆ, ಸುರಿಯುವ ಮಳೆಯಲ್ಲಿ ಮಹಿಳಾ ಅಧಿಕಾರಿ ನೆನೆಯುತ್ತಲೇ ಅವರನ್ನು ಹಿಂಬಾಲಿಸುತ್ತಾರೆ.
ವಿಡಿಯೋದಲ್ಲಿ ಶಹಬಾಜ್ ಷರೀಫ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪಲೈಸ್ ಬ್ರೋಗ್ನಿಯರ್ಟ್‌ಗೆ ಆಗಮಿಸುತ್ತಿರುವುದನ್ನು ಕಾಣಬಹುದು. ಮಳೆ ಬರುತ್ತಿದ್ದರಿಂದ ಪ್ರೊಟೊಕಾಲ್ ಅಧಿಕಾರಿಯೊಬ್ಬರು ವಾಹನದ ಹೊರಗೆ ಕೊಡೆ ಹಿಡಿದು ನಿಂತಿರುವುದು ಕಾಣಿಸುತ್ತದೆ. ಛತ್ರಿ ತೆಗೆಯುವ ಮುನ್ನ ಶೆಹಬಾಜ್ ಷರೀಫ್ ಮಹಿಳಾ ಅಧಿಕಾರಿಗೆ ಏನೋ ಹೇಳುತ್ತಿರುವುದು ಕಾಣಿಸುತ್ತದೆ.
ನಂತರ ಷರೀಫ್ ಕಟ್ಟಡವನ್ನು ಪ್ರವೇಶಿಸಿದಾಗ, ಅವರನ್ನು ಯುರೋಪ್ ಮತ್ತು ವಿದೇಶಾಂಗ ವ್ಯವಹಾರಗಳ ಫ್ರಾನ್ಸ್‌ನ ಸಚಿವ ಕ್ಯಾಥರೀನ್ ಕೊಲೊನ್ನಾ ಅವರು ಸ್ವಾಗತಿಸುತ್ತಾರೆ. ಕುತೂಹಲಕಾರಿ ವಿಷಯ ಏನೆಂದರೆ, ಈ ವಿಡಿಯೋವನ್ನು ಪಾಕಿಸ್ತಾನದ ಪ್ರಧಾನ ಮಂತ್ರಿ ಕಚೇರಿಯ ಅಧಿಕೃತ ಖಾತೆಯಿಂದ ಟ್ವೀಟ್ ಮಾಡಲಾಗಿರುವುದು.
ಈ ಘಟನೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹಲವಾರು ರೀತಿಯ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. "ಅಲ್ಲಿ ಅನೇಕ ಮಹಿಳಾ ಅಧಿಕಾರಿಗಳಿದ್ದರು. ಆಕೆ ಮತ್ತೊಬ್ಬರ ಛತ್ರಿ ಪಡೆದುಕೊಳ್ಳಬಹುದಿತ್ತಲ್ಲ" ಎಂದು ಒಬ್ಬರು ಟ್ವಿಟರ್ನಲ್ಲಿ ಬರೆದಿದ್ದಾರೆ. "ಶೆಹಬಾಜ್ ಷರೀಫ್ರನ್ನು ನೋಡಿದರೆ ಮಿಸ್ಟರ್ ಬೀನ್ ನೆನಪಾಗುತ್ತದೆ" ಎಂದು ಒಬ್ಬರು ತಮಾಷೆ ಮಾಡಿದ್ದು, "ಅವರು ಆಕೆಯ ಛತ್ರಿಯನ್ನು ಕಳವು ಮಾಡಿದರು" ಎಂದು ಮತ್ತೊಬ್ಬರು ವ್ಯಂಗ್ಯವಾಡಿದ್ದಾರೆ.