ಸಿಯೋಲ್, ದಕ್ಷಿಣ ಕೊರಿಯಾ:ಉತ್ತರ ಕೊರಿಯಾವು ತಾನು ಕಕ್ಷೆಗೆ ಸೇರಿಸಲು ವಿಫಲವಾದ ತನ್ನ ಉಪಗ್ರಹದ ಬಗ್ಗೆ ಹೇಳಿಕೊಂಡ ಹಾಗೆ ಅದು ಬಾಹ್ಯಾಕಾಶದಿಂದ ಮಿಲಿಟರಿ ವಿಚಕ್ಷಣೆ ನಡೆಸುವಷ್ಟು ಸಾಮರ್ಥ್ಯ ಹೊಂದಿರಲಿಲ್ಲ ಎಂದು ದಕ್ಷಿಣ ಕೊರಿಯಾದ ಮಿಲಿಟರಿ ಹೇಳಿದೆ. ಉತ್ತರ ಕೊರಿಯಾದ ಉಪಗ್ರಹದ ಅವಶೇಷಗಳನ್ನು ಅಧ್ಯಯನ ಮಾಡಿದ ನಂತರ ದಕ್ಷಿಣ ಕೊರಿಯಾದ ಮಿಲಿಟರಿ ಈ ಮಾಹಿತಿ ಬಹಿರಂಗಪಡಿಸಿದೆ.
ಮೇ ಅಂತ್ಯದಲ್ಲಿ ಉತ್ತರ ಕೊರಿಯಾ ತನ್ನ ಮೊದಲ ಗೂಢಚಾರಿಕೆ ಉಪಗ್ರಹವನ್ನು ಉಡಾವಣೆ ಮಾಡಲು ಪ್ರಯತ್ನಿಸಿತ್ತು. ಆದರೆ, ಅದನ್ನು ಹೊತ್ತೊಯ್ಯುವ ದೀರ್ಘ ಶ್ರೇಣಿಯ ರಾಕೆಟ್ ಕೊರಿಯನ್ ಪೆನಿನ್ಸುಲಾದ ಪಶ್ಚಿಮ ಕರಾವಳಿಯ ನೀರಿನಲ್ಲಿ ಬಿದ್ದು ಯೋಜನೆ ವಿಫಲವಾಗಿತ್ತು. ದಕ್ಷಿಣ ಕೊರಿಯಾ ಮತ್ತು ಯುನೈಟೆಡ್ ಸ್ಟೇಟ್ಸ್‌ನಿಂದ ಹೆಚ್ಚುತ್ತಿರುವ ಭದ್ರತಾ ಬೆದರಿಕೆಗಳನ್ನು ಎದುರಿಸುವ ನಿಟ್ಟಿನಲ್ಲಿ ಈ ಉಪಗ್ರಹವು ಬಾಹ್ಯಾಕಾಶ ಆಧಾರಿತ ವಿಚಕ್ಷಣ ವ್ಯವಸ್ಥೆಯ ಭಾಗವಾಗಬೇಕಿತ್ತು ಎಂದು ಉತ್ತರ ಕೊರಿಯಾ ಹೇಳಿತ್ತು.
ರಾಕೆಟ್ ಮತ್ತು ಉಪಗ್ರಹದ ಅವಶೇಷಗಳನ್ನು ಶೋಧಿಸಲು ದಕ್ಷಿಣ ಕೊರಿಯಾ ನೌಕಾಪಡೆಯ ಹಡಗುಗಳು, ವಿಮಾನಗಳು ಮತ್ತು ಡೈವರ್‌ಗಳನ್ನು ನಿಯೋಜಿಸಿತ್ತು. 36 ದಿನಗಳ ಕಾಲ ನಡೆದ ಈ ಕಾರ್ಯಾಚರಣೆ ಬುಧವಾರ ಅಂತ್ಯಗೊಂಡಿದೆ ಎಂದು ದಕ್ಷಿಣ ಕೊರಿಯಾದ ಮಿಲಿಟರಿ ತಿಳಿಸಿದೆ. ರಾಕೆಟ್ ಮತ್ತು ಉಪಗ್ರಹದ ಅಸಂಖ್ಯಾತ ಮತ್ತು ಪ್ರಮುಖ ಭಾಗಗಳನ್ನು ವಶಪಡಿಸಿಕೊಳ್ಳಲಾಗಿದೆ. ಅವುಗಳನ್ನು ಜಂಟಿಯಾಗಿ ಪರಿಶೀಲಿಸಿದ ದಕ್ಷಿಣ ಕೊರಿಯಾ ಮತ್ತು ಯುಎಸ್ ತಜ್ಞರು, ಈ ಉಪಗ್ರಹವು ಮಿಲಿಟರಿ ವಿಚಕ್ಷಣ ಕಾರ್ಯಗಳನ್ನು ನಡೆಸಲು ಸಮರ್ಥವಾಗಿಲ್ಲ ಎಂದು ತೀರ್ಮಾನಿಸಿದ್ದಾರೆ ಎಂದು ಹೇಳಿಕೆ ತಿಳಿಸಿದೆ.