ವಾಷಿಂಗ್ಟನ್: ಟೆಕ್ಸಾಸ್‌ನಲ್ಲಿ ಬಿಸಿಗಾಳಿಯಿಂದ ಜನ ತತ್ತರಿಸಿ ಹೋಗಿದ್ದಾರೆ. ಈವರೆಗೆ ಕನಿಷ್ಠ 13 ಮಂದಿ ಸುಡುವ ಶಾಖಕ್ಕೆ ಬಲಿಯಾಗಿದ್ದಾರೆ. ಅಪಾಯಕಾರಿ ತಾಪಮಾನದ ಬಗ್ಗೆ ಸರ್ಕಾರ ಎಚ್ಚರಿಕೆಗಳನ್ನು ನೀಡಿದ್ದು, ಶಾಖದ ಅಲೆಯು ಪೂರ್ವದ ಮಿಸಿಸಿಪ್ಪಿ ಮತ್ತು ಟೆನ್ನೆಸ್ಸಿಗೆ ವಿಸ್ತರಿಸಿದೆ. ಈ ಮಧ್ಯೆ, ಕ್ಯಾಲಿಫೋರ್ನಿಯಾವು ವರ್ಷದ ಮೊದಲ ಪ್ರಮುಖ ಶಾಖದ ಅಲೆಯನ್ನು ಎದುರಿಸುತ್ತಿದೆ. ಟೆಕ್ಸಾಸ್, ನ್ಯೂ ಮೆಕ್ಸಿಕೋ, ಅರಿಝೋನಾ, ಕೊಲೊರಾಡೋ ಮತ್ತು ಉತಾಹ್‌ನ ಕೆಲವು ಭಾಗಗಳಲ್ಲಿ ಅಪಾಯಕಾರಿ ಅಲೆಗೆ ಶುಷ್ಕ, ಬಿಸಿ ಗಾಳಿಯ ಪರಿಸ್ಥಿತಿ ಹೆಚ್ಚಬಹುದು ಎಂದು ರಾಷ್ಟ್ರೀಯ ಹವಾಮಾನ ಸೇವೆ ಇಲಾಖೆ ಎಚ್ಚರಿಸಿದೆ.
ಆಗ್ನೇಯ ಭಾಗದಲ್ಲಿ ವಾರದ ಮಧ್ಯದ ತಾಪಮಾನವು 100 ಪ್ಯಾರನ್ಹೀಟ್ (38 ಡಿಗ್ರಿ ಸೆಲ್ಸಿಯಸ್) ಮೀರುತ್ತದೆ ಎಂದು ಮುನ್ಸೂಚನೆ ನೀಡಲಾಗಿದೆ. ಹೆಚ್ಚಿನ ಆರ್ದ್ರತೆಯು ಕೆಲವು ಪ್ರದೇಶಗಳಲ್ಲಿ 115 ಡಿಗ್ರಿ (46 ಸೆಲ್ಸಿಯಸ್) ಗಿಂತ ಹೆಚ್ಚಿನ ಶಾಖವನ್ನು ಹೊಂದಬಹುದು ಎಂದು ನಿರೀಕ್ಷಿಸಲಾಗಿದೆ. ಕಳೆದ ವಾರದಲ್ಲಿ ಟೆಕ್ಸಾಸ್‌ನಲ್ಲಿ 38 ಡಿಗ್ರಿ ಸೆಲ್ಸಿಯಸ್ ಗಡಿ ದಾಟಿದ ತಾಪಮಾನದಿಂದಾಗಿ ತೀವ್ರ ಆರ್ದ್ರತೆ ಎದುರಿಸುತ್ತಿದೆ.
ಬಿಸಿಲಿನ ತಾಪದಿಂದ ಸಾರ್ವಜನಿಕರು ತತ್ತರಿಸುತ್ತಿದ್ದಂತೆ, ವಿದ್ಯುತ್ ಬಳಕೆ ಸಂಜೆ 6 ಗಂಟೆಗೆ 80,828 ಮೆಗಾವ್ಯಾಟ್‌ಗೆ ತಲುಪಿದೆ ಎಂದು ಮಂಗಳವಾರ ಟೆಕ್ಸಾಸ್ ಎಲೆಕ್ಟ್ರಿಕ್ ರಿಲಯಬಿಲಿಟಿ ಕೌನ್ಸಿಲ್ ಹೇಳಿದೆ. ಜುಲೈ 20, 2022 ರಂದು ತಲುಪಲಾಗಿದ್ದ 80,148 ಮೆಗಾವ್ಯಾಟ್‌ಗಳ ಗ್ರಿಡ್‌ನ ಹಿಂದಿನ ದಾಖಲೆಯನ್ನು ಮೀರಿಸಿದ್ದು, ಬುಧವಾರ ಮಧ್ಯಾಹ್ನ ಮತ್ತೊಂದು ದಾಖಲೆ ಸ್ಥಾಪಿಸಲಾಗುವುದು ಎಂದು ಪ್ರಾಧಿಕಾರವು ನಿರೀಕ್ಷಿಸಿದೆ.
ಹೀಟ್ವೇವ್ ಹಿನ್ನೆಲೆ ದೇಶದ ಉಳಿದ ಭಾಗಗಳಲ್ಲಿ ಹೆಚ್ಚಾಗಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಇತ್ತೀಚಿನ ವರ್ಷಗಳಲ್ಲಿ ಟೆಕ್ಸಾಸ್‌ನ ಜನ ತೀವ್ರವಾದ ಚಂಡಮಾರುತಗಳು ಮತ್ತು ಸುಂಟರ ಗಾಳಿ ಸೇರಿದಂತೆ ತೀವ್ರತರವಾದ ಶಾಖದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.