ಬೀಜಿಂಗ್:ದೇಶದ ಕೋವಿಡ್-19 ಪ್ರಕರಣಗಳ ಅಂಕಿ - ಅಂಶಗಳನ್ನು ಪ್ರತಿದಿನ ನೀಡುತ್ತಿದ್ದ ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗವು ಭಾನುವಾರದಿಂದ ಕೋವಿಡ್ ಅಪ್ಡೇಟ್ ಪ್ರಕಟಿಸುವುದನ್ನು ನಿಲ್ಲಿಸಿದೆ ಎಂದು ಚೀನಾದ ಮುಂಚೂಣಿ ಮಾಧ್ಯಮ ಸಂಸ್ಥೆಯು ವರದಿ ಮಾಡಿದೆ. ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ (NHC) ಭಾನುವಾರದಿಂದ ದೈನಂದಿನ ಕೋವಿಡ್-19 ಪ್ರಕರಣಗಳ ಮಾಹಿತಿ ಪ್ರಕಟಿಸುವುದನ್ನು ನಿಲ್ಲಿಸುತ್ತದೆ. ಬದಲಿಗೆ, ಚೀನಾದ ರೋಗ ನಿಯಂತ್ರಣ ಮತ್ತು ರೋಗ ತಡೆಗಟ್ಟುವಿಕೆ ಕೇಂದ್ರವು ಕೋವಿಡ್ ಸಂಬಂಧಿತ ಮಾಹಿತಿಯನ್ನು ಅಧ್ಯಯನ ಮತ್ತು ಉಲ್ಲೇಖಕ್ಕಾಗಿ ಬಿಡುಗಡೆ ಮಾಡುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.
ಏರ್‌ಫಿನಿಟಿಯ ಹೊಸ ಮಾಡೆಲಿಂಗ್ ಚೀನಾದ ಪ್ರಾದೇಶಿಕ ಪ್ರಾಂತ್ಯಗಳ ಡೇಟಾವನ್ನು ಪರಿಶೀಲಿಸಿದೆ. ಪ್ರಸ್ತುತ ಏಕಾಏಕಿ ಕೆಲ ಪ್ರದೇಶಗಳಲ್ಲಿ ಕೋವಿಡ್ ಹೆಚ್ಚು ವೇಗವಾಗಿ ಹರಡುತ್ತಿದೆ. ಬೀಜಿಂಗ್ ಮತ್ತು ಗುವಾಂಗ್‌ಡಾಂಗ್‌ನಲ್ಲಿ ಪ್ರಕರಣಗಳು ಅತಿ ವೇಗವಾಗಿ ಏರುತ್ತಿವೆ. ಪ್ರಾದೇಶಿಕ ದತ್ತಾಂಶದಲ್ಲಿನ ಟ್ರೆಂಡ್ಗಳನ್ನು ಬಳಸಿಕೊಂಡು, ನಮ್ಮ ಸಾಂಕ್ರಾಮಿಕ ರೋಗಶಾಸ್ತ್ರಜ್ಞರ ತಂಡವು ಪ್ರಸ್ತುತ ಪ್ರಕರಣಗಳು ಹೆಚ್ಚುತ್ತಿರುವ ಪ್ರದೇಶಗಳಲ್ಲಿ ಮೊದಲ ಗರಿಷ್ಠ ಮಟ್ಟವನ್ನು (ಪೀಕ್) ಮುನ್ಸೂಚಿಸಿದೆ ಮತ್ತು ಇತರ ಚೀನೀ ಪ್ರಾಂತ್ಯಗಳಲ್ಲಿ ನಂತರದ ಉಲ್ಬಣಗಳಿಂದ ಎರಡನೇ ಗರಿಷ್ಠ ಮಟ್ಟ ತಲುಪಲಿದೆ ಎಂದು ಏರ್‌ಫಿನಿಟಿ ಹೇಳಿಕೆಯಲ್ಲಿ ತಿಳಿಸಿದೆ.
ಜನವರಿಯ ಗರಿಷ್ಠ ದಿನಕ್ಕೆ 3.7 ಮಿಲಿಯನ್ ಮತ್ತು ಮಾರ್ಚ್ 2023 ರಲ್ಲಿ ದಿನಕ್ಕೆ 4.2 ಮಿಲಿಯನ್ ತಲುಪಬಹುದು ಎಂದು ಏರ್‌ಫಿನಿಟಿ ಮಾದರಿಯು ಅಂದಾಜಿಸಿದೆ. ಏರ್‌ಫಿನಿಟಿ ಲಸಿಕೆ ಮತ್ತು ಸಾಂಕ್ರಾಮಿಕ ರೋಗಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ ಲೂಯಿಸ್ ಬ್ಲೇರ್ ಮಾತನಾಡಿ, ಚೀನಾ ಸಾಮೂಹಿಕ ಪರೀಕ್ಷೆಯನ್ನು ನಿಲ್ಲಿಸಿದೆ ಮತ್ತು ಇನ್ನು ಮುಂದೆ ಲಕ್ಷಣರಹಿತ ಪ್ರಕರಣಗಳನ್ನು ವರದಿ ಮಾಡುತ್ತಿಲ್ಲ. ಈ ಸಂಯೋಜನೆಯ ಮೂಲಕ ಸಿಗುವ ಅಧಿಕೃತ ಡೇಟಾ ದೇಶಾದ್ಯಂತ ಏಕಾಏಕಿ ಹೆಚ್ಚಾಗುತ್ತಿರುವ ಕೋವಿಡ್ ಪರಿಸ್ಥಿತಿಯ ಪ್ರತಿಬಿಂಬವಾಗಿರುವುದು ಸಾಧ್ಯವಿಲ್ಲ ಎಂದಿದ್ದಾರೆ.
ಕೋವಿಡ್‌ಗೆ ಪಾಸಿಟಿವ್ ಆಗಿ ಉಸಿರಾಟದ ವೈಫಲ್ಯ ಅಥವಾ ನ್ಯುಮೋನಿಯಾದಿಂದ ಸಾಯುವವರನ್ನು ಮಾತ್ರ ಪಟ್ಟಿಗೆ ಸೇರ್ಪಡೆ ಮಾಡುವಂತೆ ಚೀನಾ ಕೋವಿಡ್-19 ಸಾವುಗಳನ್ನು ದಾಖಲಿಸುವ ವಿಧಾನವನ್ನು ಬದಲಾಯಿಸಿದೆ. ಪಾಸಿಟಿವ್ ಬಂದ ನಂತರ ನಿರ್ದಿಷ್ಟ ಅವಧಿಯಲ್ಲಿ ಸಾವು ಸಂಭವಿಸಿದರೆ ಅಥವಾ ಕೋವಿಡ್-19ನಿಂದಲೇ ಸಾವು ಸಂಭವಿಸಿದೆ ಎಂದು ದಾಖಲಿಸುವ ಇತರ ದೇಶಗಳ ಮಾದರಿಗಿಂತ ಚೀನಾದ ಈ ಮಾದರಿ ವಿಭಿನ್ನವಾಗಿದೆ. ಈ ಬದಲಾವಣೆಯು ಚೀನಾದಲ್ಲಿ ಕೋವಿಡ್ನಿಂದ ಸಂಭವಿಸುವ ಸಾವಿನ ಪ್ರಮಾಣವನ್ನು ಕಡಿಮೆಯಾಗಿ ತೋರಿಸಬಹುದು.