ಬ್ಯಾಂಕಾಕ್:ಥಾಯ್ಲೆಂಡ್‌ನ ಕರಾವಳಿಯಲ್ಲಿ ಗಸ್ತು ಕಾರ್ಯಾಚರಣೆ ನಡೆಸುತ್ತಿದ್ದ ಥಾಯ್ ಯುದ್ಧನೌಕೆ ಆಕಸ್ಮಿಕವಾಗಿ ಮುಳುಗಿದೆ. ಈ ದುರಂತದಲ್ಲಿ 75 ಜನರನ್ನು ರಕ್ಷಿಸಲಾಗಿದ್ದು, 31 ಮಂದಿ ನಾಪತ್ತೆಯಾಗಿದ್ದಾರೆ. ನಾಪತ್ತೆಯಾದವರಿಗಾಗಿ ಹಡಗು ಮತ್ತು ಹೆಲಿಕಾಪ್ಟರ್‌ಗಳೊಂದಿಗೆ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.
ಥಾಯ್ಲೆಂಡ್‌ನ ಪ್ರಚುಪ್ ಖಿರಿ ಖಾನ್ ಪ್ರಾಂತ್ಯದ ಕರಾವಳಿಯಿಂದ 20 ನಾಟಿಕಲ್ ಮೈಲಿ ದೂರದಲ್ಲಿ ಭಾನುವಾರ ಸಂಜೆ HTMS ಸುಖೋಥೈ ಯುದ್ಧ ನೌಕೆ ಗಸ್ತು ಕರ್ತವ್ಯದಲ್ಲಿ ಭಾಗವಹಿಸಿತ್ತು. ಆ ಸಮಯದಲ್ಲಿ ಬಲವಾದ ಗಾಳಿ ಮತ್ತು ಸಮುದ್ರದ ನೀರು ಯುದ್ಧನೌಕೆಗೆ ನುಗ್ಗಿದೆ. ಇದರಿಂದಾಗಿ ಯುದ್ಧ ನೌಕೆಯ ವಿದ್ಯುತ್ ವ್ಯವಸ್ಥೆಗೆ ಹಾನಿಯಾಗಿದೆ.
ಸುದ್ದಿ ತಿಳಿದ ಕೂಡಲೇ ಥಾಯ್ ನೌಕಾಪಡೆಯು ಮೂರು ಯುದ್ಧನೌಕೆಗಳು ಮತ್ತು ಎರಡು ಹೆಲಿಕಾಪ್ಟರ್‌ಗಳನ್ನು ದುರಂತ ಸ್ಥಳಕ್ಕೆ ಕಳುಹಿಸಿ ರಕ್ಷಣಾ ಕಾರ್ಯ ಕೈಗೊಳ್ಳಲಾಗಿತ್ತು. ರಕ್ಷಣಾ ಸಿಬ್ಬಂದಿ ನೌಕೆಯಲ್ಲಿ ನುಗ್ಗಿದ ನೀರನ್ನು ಹೊರ ತೆಗೆಯಲು ಪ್ರಯತ್ನಿಸಿದರು. ಆದರೆ, ಬಲವಾದ ಗಾಳಿಯಿಂದಾಗಿ ಅದು ಸಾಧ್ಯವಾಗಲಿಲ್ಲ. ಇಂಜಿನ್ ವ್ಯವಸ್ಥೆ ಕೆಟ್ಟು ಕರೆಂಟ್ ಇಲ್ಲದ ಕಾರಣ ನೌಕೆಯೊಳಗೆ ಹೆಚ್ಚು ನೀರು ನುಗ್ಗುತ್ತಿತ್ತು. ಹೀಗಾಗಿ ಹಡಗು ನಿಧಾನವಾಗಿ ಒಂದು ಬದಿಗೆ ವಾಲಿ ಮುಳುಗಿತು.
ಅಪಘಾತದ ಸಮಯದಲ್ಲಿ ನೌಕಾಪಡೆಯ 106 ಸಿಬ್ಬಂದಿ ನೌಕೆಯಲ್ಲಿ ಇದ್ದರು. ಈ ಪೈಕಿ 75 ನಾವಿಕರನ್ನು ರಕ್ಷಣಾ ಸಿಬ್ಬಂದಿ ರಕ್ಷಿಸಿದೆ. ಕಳೆದ ಮಧ್ಯರಾತ್ರಿಯಿಂದ 31 ಮಂದಿಗಾಗಿ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಆದರೆ, ಹವಾಮಾನ ವೈಪರೀತ್ಯದಿಂದಾಗಿ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಥಾಯ್ ನೌಕಾಪಡೆಯು ಅಪಘಾತದ ದೃಶ್ಯಗಳನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದೆ.
ಓದಿ:ಆಟವಾಡುತ್ತಾ ಟಿವಿ ರಿಮೋಟ್ ಬ್ಯಾಟರಿ ನುಂಗಿದ ಎರಡು ವರ್ಷದ ಮಗು!