ಚಿಯಾಂಗ್ ರಾಯ್ (ಥಾಯ್ಲೆಂಡ್): 2018ರಲ್ಲಿ ಪ್ರವಾಹಕ್ಕೆ ಸಿಲುಕಿದ್ದ ಗುಹೆಯಿಂದ ರಕ್ಷಿಸಲ್ಪಟ್ಟಿದ್ದ ಥಾಯ್ಲೆಂಡ್ನ ಫುಟ್ಬಾಲ್ ಆಟಗಾರರೊಬ್ಬರು ಇಂಗ್ಲೆಂಡ್ನಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. 17 ವರ್ಷದ ಡುವಾಂಗ್‌ಫೆಟ್ ಡೊಮ್ ಫ್ರೊಮ್‌ಥೆಪ್ ಮೃತರಾಗಿದ್ದು, ಚಿತಾಭಸ್ಮವು ದೂರದ ಉತ್ತರ ಥಾಯ್ ಪ್ರಾಂತ್ಯದ ಚಿಯಾಂಗ್ ರಾಯ್‌ಗೆ ಶನಿವಾರ ಆಗಮಿಸಿದೆ.
2018ರ ಪ್ರವಾಹ ಸಂದರ್ಭದಲ್ಲಿ ಡೊಮ್ ಫ್ರೊಮ್‌ಥೆಪ್ ಹಾಗೂ ತನ್ನ ತಂಡದ ಸಹ ಆಟಗಾರರು ಮತ್ತು ತರಬೇತುದಾರರೊಂದಿಗೆ ಗುಹೆಯಲ್ಲಿ ಎರಡು ವಾರಗಳಿಗಿಂತ ಹೆಚ್ಚು ಕಾಲ ಸಿಲುಕಿದ್ದರು. ನಂತರದಲ್ಲಿ ರಕ್ಷಣಾ ತಂಡಗಳು ಸುರಕ್ಷಿತವಾಗಿ ಡೊಮ್ ಫ್ರೊಮ್‌ಥೆಪ್ ಸೇರಿದಂತೆ 12 ಜನರನ್ನು ರಕ್ಷಣೆ ಮಾಡಿದ್ದವು. ಇಂಗ್ಲೆಂಡ್ನ ಲೀಸೆಸ್ಟರ್‌ಶೈರ್‌ನಲ್ಲಿರುವ ಬ್ರೂಕ್ ಹೌಸ್ ಕಾಲೇಜ್ ಫುಟ್‌ಬಾಲ್ ಅಕಾಡೆಮಿಯಲ್ಲಿ ಡೊಮ್ ಇದ್ದರು.
ಇದನ್ನೂ ಓದಿ:'ಕಾಲ್ಪನಿಕ ದೇಶ'ದ ಮಾತುಗಳನ್ನು ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ: ನಿತ್ಯಾನಂದನ ಪ್ರತಿನಿಧಿ ಹೇಳಿಕೆಗೆ ವಿಶ್ವಸಂಸ್ಥೆ ಸ್ಪಷ್ಟನೆ
ಆದರೆ, ಫೆಬ್ರವರಿ 12ರಂದು ಅಕಾಡೆಮಿಯ ತನ್ನ ಕೋಣೆಯಲ್ಲಿ ಡೊಮ್ ಫ್ರೊಮ್‌ಥೆಪ್ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ನಂತರ ಆಸ್ಪತ್ರೆಗೆ ದಾಖಲಿಸಿದ ಎರಡು ದಿನಗಳ ನಂತರ ಕೊನೆಯುಸಿರೆಳೆದಿದ್ದಾರೆ. ಹೀಗಾಗಿ ಈ ವಾರದ ಆರಂಭದಲ್ಲಿ ಇಂಗ್ಲೆಂಡ್ನಲ್ಲೇ ಡುವಾಂಗ್‌ಫೆಟ್ ಅಂತ್ಯಕ್ರಿಯೆಯ ನೆರವೇರಿಸಲಾಗಿದೆ. ಕುಟುಂಬಸ್ಥರ ಇಚ್ಛೆಗೆ ಅನುಗುಣವಾಗಿ ಬೌದ್ಧ ಸನ್ಯಾಸಿಗಳ ನೇತೃತ್ವದಲ್ಲಿ ವಿಧಿ ವಿಧಾನಗಳನ್ನು ನೆರವೇರಿಸಲಾಗಿದೆ.
ಲೈವ್ನಲ್ಲಿ ಮಗನ ಅಂತ್ಯಕ್ರಿಯೆ ವೀಕ್ಷಿಸಿದ ಪೋಷಕರು: ದೂರದ ಇಂಗ್ಲೆಂಡ್ನಲ್ಲಿ ಡುವಾಂಗ್‌ಫೆಟ್ ಡೊಮ್ ಫ್ರೊಮ್‌ಥೆಪ್ ಮೃತಪಟ್ಟಿದ್ದರಿಂದ ಹಾಗೂ ಅಂತ್ಯ ಸಂಸ್ಕಾರವೂ ಅಲ್ಲಿಯೇ ನೆರವೇರಿಸಿದ್ದರಿಂದ ಪೋಷಕರು ಪಾಲ್ಗೊಳ್ಳಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಚಿಯಾಂಗ್ ರಾಯ್‌ನಿಂದಲೇ ಇಂಗ್ಲೆಂಡ್ನಲ್ಲಿ ನಡೆದ ಅಂತ್ಯಕ್ರಿಯೆಯನ್ನು ನೇರ ಪ್ರಸಾರದ ಮೂಲಕ ಆತನ ಕುಟುಂಬವು ವೀಕ್ಷಿಸಿದೆ.
ತವರಿಗೆ ಚಿತಾಭಸ್ಮ ಆಗಮನ: ಅಂತ್ಯಕ್ರಿಯೆಯ ಕಾರ್ಯಗಳ ನಂತರ ಡುವಾಂಗ್‌ಫೆಟ್ ಚಿತಾಭಸ್ಮವನ್ನು ಇಂಗ್ಲೆಂಡ್ನಿಂದ ಇಂದು ತವರು ರಾಷ್ಟ್ರಕ್ಕೆ ತರಲಾಗಿದೆ. ಬೆಳಗ್ಗೆ ಬ್ಯಾಂಕಾಕ್‌ನ ಸುವರ್ಣಭೂಮಿ ವಿಮಾನ ನಿಲ್ದಾಣದಲ್ಲಿ ಕುಟುಂಬ ಸದಸ್ಯರಿಗೆ ಚಿತಾಭಸ್ಮ ಹಸ್ತಾಂತರಿಸಲಾಯಿತು. ನಂತರದಲ್ಲಿ ಚಿಯಾಂಗ್ ರಾಯ್‌ಗೆ ವಿಮಾನದಲ್ಲಿ ಕುಟುಂಬಸ್ಥರು ಆಗಮಿಸಿದರು.
ಡುವಾಂಗ್‌ಫೆಟ್ ಚಿತಾಭಸ್ಮ ಆಗಮನದ ವಿಷಯ ತಿಳಿದ ಕುಟುಂಬದ ಸ್ನೇಹಿತರು ಚಿಯಾಂಗ್ ರಾಯ್ ವಿಮಾನ ನಿಲ್ದಾಣದಲ್ಲಿ ಕಾಯುತ್ತಿದ್ದರು. ಅವರೊಂದಿಗೆ ಗುಹೆಯಲ್ಲಿ ಸಿಲುಕಿದ್ದ ಮಾಜಿ ತರಬೇತುದಾರ ಎಕಾಪೋಲ್ ಚಾಂತಾವಾಂಗ್ ಕೂಡ ವಿಮಾನ ನಿಲ್ದಾಣಕ್ಕೆ ಬಂದಿದ್ದರು. ತಮ್ಮ ಮಾಜಿ ಶಿಷ್ಯನ ದೊಡ್ಡ ಭಾವಚಿತ್ರ ಹಿಡಿದು ಚಾಂತಾವಾಂಗ್ ನಿಂತಿದ್ದರು. ಚಿಯಾಂಗ್ ರಾಯ್ ವಿಮಾನ ನಿಲ್ದಾಣದಲ್ಲಿ ಡುವಾಂಗ್‌ಫೆಟ್ ಅವರ ಅಜ್ಜಿ ಕೂಡ ಚಿತಾಭಸ್ಮ ಬರುವಿಕೆಗಾಗಿ ಕಾಯುತ್ತಿದ್ದರು. ವಿಮಾನ ನಿಲ್ದಾಣದಲ್ಲಿ ಚಿತಾಭಸ್ಮ ತುಂಬಿದ್ದ ಪೆಟ್ಟಿಗೆ ಹಸ್ತಾಂತರಿಸುತ್ತಿದ್ದಂತೆ ಅಜ್ಜಿಯ ಆಕ್ರಂದನ ಮುಗಿಲು ಮುಟ್ಟಿತ್ತು.
ಗುಹೆ ಸಮೀಪವೇ ಅಂತಿಮ ಸಂಸ್ಕಾರ:ಮತ್ತೊಂದೆಡೆ, ಡುವಾಂಗ್‌ಫೆಟ್ ಚಿತಾಭಸ್ಮ ತವರಿಗೆ ಆಗಮಿಸಿದ ಹಿನ್ನೆಲೆಯಲ್ಲಿ ಕುಟುಂಬಸ್ಥರು, ಇಲ್ಲಿ ಮತ್ತೊಮ್ಮೆ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಲಿದ್ದಾರೆ. 2018ರಲ್ಲಿ ರಕ್ಷಿಸಲ್ಪಟ್ಟಿದ್ದ ಥಾಮ್ ಲುವಾಂಗ್ ಗುಹೆಯಿಂದ 6.2 ಮೈಲಿ ದೂರದಲ್ಲಿರುವ ವಾಟ್ ಫ್ರಾ ದಟ್ ಡೋಯಿ ವಾವೊ ಪ್ರದೇಶದಲ್ಲಿ ತಮ್ಮ ಅಂತಿಮ ಕಾರ್ಯಗಳು ನಡೆಯಲಿವೆ.
ಇದನ್ನೂ ಓದಿ:ಹೊಸ ಕಾನೂನಿಗೆ ಉದ್ಯಮಿಗಳು ತತ್ತರ.. ಪುರುಷರಿಗೆ ಯುವತಿಯರ ಡ್ರೆಸ್ ಹಾಕಿ ಜಾಹೀರಾತು ಕ್ರಿಯೇಟ್!