ಸ್ಯಾನ್ ಫ್ರಾನ್ಸಿಸ್ಕೋ (ಅಮೆರಿಕ): ಎಲೋನ್ ಮಸ್ಕ್ ಒಡೆತನದ ಕಂಪನಿ ಟೆಸ್ಲಾ ವಿಶ್ವದ ಮೋಸ್ಟ್ ವಾಂಟೆಡ್ ಕಾರ್ ಬ್ರಾಂಡ್ ಆಗಿದೆ ಎಂದು ಹೊಸ ವರದಿಯೊಂದು ಹೇಳಿದೆ. ಯುಕೆ ಮೂಲದ ಸಂಸ್ಥೆ ಆಟೋ ಟ್ರೇಡರ್ ಪ್ರಕಾರ, ಟೆಸ್ಲಾ ವಿಶ್ವದಲ್ಲಿ ಅತಿ ಹೆಚ್ಚು ಜನರ ಖರೀದಿಸಲು ಬಯಸುವ ಕಾರ್ ಬ್ರ್ಯಾಂಡ್ ಆಗಿದೆ. ಕಾರು ಕೊಳ್ಳಲು 39 ದೇಶಗಳಲ್ಲಿ ಗೂಗಲ್ ಮೂಲಕ ಅತಿ ಹೆಚ್ಚು ಹುಡುಕಲಾದ ಕಾರ್ ಟೆಸ್ಲಾ ಆಗಿದೆ. ಇಡೀ ಪ್ರಪಂಚದಲ್ಲಿ ಜನ ಅತಿ ಹೆಚ್ಚಾಗಿ ಖರೀದಿಸಲು ಬಯಸುವ ಕಾರುಗಳನ್ನು ಕಂಡುಹಿಡಿಯಲು 180 ಕ್ಕೂ ಹೆಚ್ಚು ದೇಶಗಳಲ್ಲಿ 200 ಕ್ಕೂ ಹೆಚ್ಚು ಕಾರ್ ಬ್ರ್ಯಾಂಡ್‌ಗಳಿಗಾಗಿ ಜಾಗತಿಕ ಸರ್ಚ್ ಡೇಟಾವನ್ನು ವಿಶ್ಲೇಷಿಸಲಾಗಿದೆ.
50 ರಾಜ್ಯಗಳಲ್ಲಿ 25ರಲ್ಲಿ ಮೊದಲ ಸ್ಥಾನ:ವರದಿಯ ಪ್ರಕಾರ ಟೆಸ್ಲಾ ಅಮೆರಿಕದಲ್ಲಿ (50 ರಾಜ್ಯಗಳ ಪೈಕಿ 25 ರಲ್ಲಿ) ಮೊದಲ ಸ್ಥಾನದಲ್ಲಿದೆ. ಹಾಗೆಯೇ ಕೆನಡಾ, ಫ್ರಾನ್ಸ್, ಸ್ಪೇನ್, ಜರ್ಮನಿ, ಆಸ್ಟ್ರೇಲಿಯಾ, ಯುಎಇ ಮತ್ತು ಸ್ಕ್ಯಾಂಡಿನೇವಿಯಾ ದೇಶಗಳಲ್ಲೂ ಟೆಸ್ಲಾ ನಂ.1 ಬೇಡಿಕೆಯ ಕಾರ್ ಆಗಿದೆ. ಐಸ್‌ಲ್ಯಾಂಡ್, ಮೆಕ್ಸಿಕೋ, ಅರ್ಜೆಂಟೀನಾ, ಭಾರತ ಮತ್ತು ಫಿಲಿಪೈನ್ಸ್ ಸೇರಿದಂತೆ 27 ದೇಶಗಳಲ್ಲಿ ಹೆಚ್ಚು ಹುಡುಕಲ್ಪಟ್ಟ ಕಾರುಗಳ ಪಟ್ಟಿಯಲ್ಲಿ ಜೀಪ್ ಮೊದಲನೇ ಸ್ಥಾನದಲ್ಲಿದ್ದು, ಜಾಗತಿಕವಾಗಿ ಇದು ಎರಡನೇ ಸ್ಥಾನದಲ್ಲಿದೆ.
ನೀವು ಮಾರಾಟ ಮಾಡಲು ಬಯಸಿದ ತಕ್ಷಣ ಸೇಲ್:ಯಾರಾದರೂ ತಮ್ಮ ಜೀಪ್ ರಾಂಗ್ಲರ್ ಕಾರನ್ನು ಮಾರಾಟ ಮಾಡಲು ಬಯಸಿದರೆ ಅದು ತಕ್ಷಣವೇ ಮಾರಾಟವಾಗಿ ಬಿಡುತ್ತದೆ. ಪ್ರತಿ ತಿಂಗಳು 'ಸೆಕೆಂಡ್ ಹ್ಯಾಂಡ್ ಜೀಪ್' ಗಾಗಿ ಆನ್ಲೈನ್ನಲ್ಲಿ ಸುಮಾರು 4,500 ಸರ್ಚ್ ಮಾಡಲಾಗುತ್ತದೆ ಎಂದು ವರದಿ ಹೇಳಿದೆ. ಇದಲ್ಲದೆ, ಬಿಎಂಡಬ್ಲ್ಯೂ ಮತ್ತು ಟೊಯೋಟಾ ಹೆಚ್ಚು ಹುಡುಕಲ್ಪಟ್ಟ ಕಾರ್ ಬ್ರಾಂಡ್‌ಗಳಲ್ಲಿ ಮೂರನೇ ಮತ್ತು ನಾಲ್ಕನೇ ಸ್ಥಾನದಲ್ಲಿವೆ ಎಂದು ವರದಿ ತೋರಿಸಿದೆ.