ಮಧ್ಯ ಆಫ್ರಿಕಾದಲ್ಲಿರುವ ಪುಟ್ಟ ದೇಶ ಕಾಂಗೋದಲ್ಲಿ ಉಗ್ರರು ಮತ್ತು ಸರ್ಕಾರದ ನಡುವಿನ ಕಾದಾಟದಿಂದಾಗಿ ಅಮಾಯಕ ಜನರು ಇನ್ನಿಲ್ಲದ ಕ್ರೌರ್ಯಕ್ಕೆ ಸಿಲುಕುತ್ತಿದ್ದಾರೆ. ಓರ್ವ ಮಹಿಳೆಯನ್ನು ಎರಡು ಬಾರಿ ಅಪಹರಿಸಿದ ಉಗ್ರರು ಅತ್ಯಾಚಾರ ಮಾಡಿದ್ದಲ್ಲದೇ, ಆಕೆಯ ಕೈಯಿಂದಲೇ ಮಾನವನ ಮಾಂಸವನ್ನೂ ಬೇಯಿಸಿ ಆಕೆಗೇ ತಿನ್ನಿಸಿದ್ದಾರೆ. ಈ ಪೈಶಾಚಿಕ ಕೃತ್ಯ ವಿಶ್ವಸಂಸ್ಥೆಯಲ್ಲಿ ಪ್ರತಿಧ್ವನಿಸಿದೆ.
ಈ ಬಗ್ಗೆ ಮಹಿಳಾ ಮಾನವ ಹಕ್ಕುಗಳ ಸಂಸ್ಥೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ದೂರು ನೀಡಿದೆ. ಪ್ರಜಾಸತ್ತಾತ್ಮಕ ರಾಷ್ಟ್ರವಾದ ಕಾಂಗೋದಲ್ಲಿ ಉಗ್ರಗಾಮಿಗಳ ಹಿಂಸಾತ್ಮಕತೆ ಮಿತಿಮೀರಿದೆ. ಅಲ್ಲಿನ ಜನರನ್ನು ಅಪಹರಿಸಿ ಅತ್ಯಾಚಾರ ಮಾಡಿ ಮಾನವ ಹಕ್ಕುಗಳನ್ನು ಹರಣ ಮಾಡಲಾಗುತ್ತಿದೆ ಎಂದು ತೀವ್ರ ಆಕ್ರೊಶ ವ್ಯಕ್ತಪಡಿಸಿದೆ.
ಕಾಂಗೋ ಬಿಕ್ಕಟ್ಟಿನ ಬಗ್ಗೆ ನಡೆದ ಭದ್ರತಾ ಮಂಡಳಿಯ ಸಭೆಯಲ್ಲಿ ಮಹಿಳಾ ಹಕ್ಕುಗಳ ಸಂಸ್ಥೆಯ ಅಧ್ಯಕ್ಷೆ ಜೂಲಿಯೆನ್ ಲುಸೆಂಗೆ ಓರ್ವ ಮಹಿಳೆಯ ಮೇಲಾದ ಪೈಶಾಚಿಕ ಕೃತ್ಯವನ್ನು ಸಭೆಯಲ್ಲಿ ತೆರೆದಿಟ್ಟರು.
ಅತ್ಯಾಚಾರ ಮಾಡಿ, ಮನುಷ್ಯನ ಮಾಂಸ ತಿನ್ನಿಸಿದ್ರು:ಮಹಿಳೆಯನ್ನು ಅಪಹರಿಸಿದ ಕೊಡೆಕೊ ಉಗ್ರರು ಆಕೆಯ ಮೇಲೆ ಪದೇ ಪದೇ ಅತ್ಯಾಚಾರ ಮಾಡಿದ್ದಾರೆ. ಅಲ್ಲದೇ, ದೈಹಿಕವಾಗಿ ಹಿಂಸಿಸಲಾಗಿದೆ. ಅಪಹರಣಕ್ಕೊಳಗಾದ ವ್ಯಕ್ತಿಯ ಶಿರಚ್ಛೇದನ ಮಾಡಿ ಆತನ ದೇಹದ ಮಾಂಸವನ್ನು ಆಹಾರವನ್ನಾಗಿ ತಯಾರಿಸಲು ಮಹಿಳೆಗೆ ತಾಕೀತು ಮಾಡಿದ್ದಾರೆ. ಮಾನವನ ಮಾಂಸವನ್ನು ಬೇಯಿಸಿದ ಬಳಿಕ ಅದನ್ನು ಉಳಿದ ಅಪಹರಣಕಾರರಿಗೆ ಬಲವಂತವಾಗಿ ತಿನ್ನಿಸಲಾಗಿದೆ. ಅಲ್ಲದೇ, ಆಕೆಗೂ ಆ ಮಾಂಸವನ್ನು ತಿನ್ನಿಸಿದ್ದಾರೆ ಎಂದು ಘೋರ ಘಟನೆಯನ್ನು ಸಭೆಗೆ ಗಮನಕ್ಕೆ ತಂದರು.
ಅಲ್ಲಿಂದ ತಪ್ಪಿಸಿಕೊಂಡು ಬಂದಿದ್ದ ಆ ಮಹಿಳೆಯನ್ನು ಮತ್ತೆ ಅಪಹರಿಸಿದ ಇನ್ನೊಂದು ಗುಂಪಿನ ಉಗ್ರರು ಆಕೆಯ ಮೇಲೆ ಅಮಾನವೀಯ ಕೃತ್ಯವನ್ನು ಮುಂದುವರಿಸಿದ್ದಾರೆ. ಮತ್ತೊಮ್ಮೆ ಆಕೆಗೆ ಮಾನವನ ಮಾಂಸವನ್ನು ಬಲವಂತವಾಗಿ ತಿನ್ನಿಸಿದ್ದಾರೆ ಎಂದು ಜೂಲಿಯೆನ್ ಲುಸೆಂಗೆ ತಿಳಿಸಿದರು.
ಕಾಂಗೋದಲ್ಲಿ ಭೂಮಿ ಮತ್ತು ಸಂಪನ್ಮೂಲಗಳ ಮೇಲೆ ಒಡೆತನ ಸಾಧಿಸುವ ಸಲುವಾಗಿ ದೀರ್ಘಕಾಲದಿಂದ ಅಲ್ಲಿನ ಸರ್ಕಾರ ಮತ್ತು ಕೊಡೆಕೊ ಉಗ್ರರ ಮಧ್ಯೆ ತಿಕ್ಕಾಟ ನಡೆಯುತ್ತಿದೆ. ಕಳೆದೊಂದು ದಶಕದಲ್ಲಿ ಬಂಡುಕೋರರು ಸಾವಿರಾರು ಜನರನ್ನು ಕೊಂದು ಲಕ್ಷಾಂತರ ಜನರನ್ನು ಅಪಹರಿಸಿದ್ದಾರೆ.
ಇದನ್ನೂ ಓದಿ:ಪುಟಿನ್ ಮಹಿಳೆಯಾಗಿದ್ರೆ ಯುದ್ಧ ತಪ್ಪಿಸಬಹುದಿತ್ತೇನೋ: ಜಾನ್ಸನ್ ವಾಗ್ದಾಳಿ, ರಷ್ಯಾ ಆಕ್ರೋಶ!