ನವದೆಹಲಿ: ಹವಾಮಾನ ಬದಲಾವಣೆ ಮತ್ತು ಆಹಾರ ಭದ್ರತೆಯಂಥ ಭಾರತದ ಕೆಲವು ದೊಡ್ಡ ಸವಾಲುಗಳನ್ನು ಪರಿಹರಿಸಲು ತಂತ್ರಜ್ಞಾನವು ಸಹಾಯ ಮಾಡಬಹುದು ಎಂದು ಮೈಕ್ರೋಸಾಫ್ಟ್ ಅಧ್ಯಕ್ಷ ಬ್ರಾಡ್ ಸ್ಮಿತ್ ಗುರುವಾರ ಹೇಳಿದ್ದಾರೆ. ಈ ವಾರ ಭಾರತ ಪ್ರವಾಸದಲ್ಲಿರುವ ಸ್ಮಿತ್, ಜಾಗತಿಕ ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡುವ ವಿಶ್ವ ದರ್ಜೆಯ ಆವಿಷ್ಕಾರಗಳ ಮೂಲಕ ದೇಶವು ದೈತ್ಯ ಸಾಧನೆ ಮಾಡಬಹುದು ಎಂದು ಹೇಳಿದರು. ದೇಶವು 75 ವರ್ಷಗಳ ಸ್ವಾತಂತ್ರ್ಯದ ಸಂಭ್ರಮದಲ್ಲಿರುವಾಗ ನಾನು ಭಾರತದಲ್ಲಿ ಇದ್ದೇನೆ ಎಂದು ಅವರು ತಿಳಿಸಿದರು.
ತಂತ್ರಜ್ಞಾನವು ಭಾರತದ ಕೆಲವು ದೊಡ್ಡ ಸವಾಲುಗಳನ್ನು ಪರಿಹರಿಸಲು ಹೇಗೆ ಸಹಾಯ ಮಾಡುತ್ತದೆ ಮತ್ತು ಭಾರತದ ಆವಿಷ್ಕಾರವು ಭವಿಷ್ಯವನ್ನು ಹೇಗೆ ರೂಪಿಸುತ್ತಿದೆ ಎಂಬುದರ ಕುರಿತು ಇನ್ನಷ್ಟು ತಿಳಿದುಕೊಳ್ಳಲು ಇದು ಕುತೂಹಲಕಾರಿ ಸಮಯ ಎಂದು ಸ್ಮಿತ್ ಟ್ವೀಟ್ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಭಾರತದ ಟ್ವಿಟರ್ ಬಳಕೆದಾರರೊಬ್ಬರು, ಭಾರತಕ್ಕೆ ಸ್ವಾಗತ ಬ್ರಾಡ್. ಆಹಾರ ಭದ್ರತೆ ಮತ್ತು ಹವಾಮಾನ ಬದಲಾವಣೆ ಮಾನವೀಯತೆಗೆ ದೊಡ್ಡ ಬೆದರಿಕೆಯಾಗಿದೆ ಮತ್ತು ಭಾರತವು ಜಾಗತಿಕ ನಾಯಕನಾಗಿ ಹೊರಹೊಮ್ಮುತ್ತದೆ ಎಂದು ನಾನು ಬಲವಾಗಿ ನಂಬುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.