ಲಾಹೋರ್ (ಪಾಕಿಸ್ತಾನ್) : ಈ ವರ್ಷದ ಬಜೆಟ್ ನಂತರ ಏಕಕಾಲದಲ್ಲಿ ಚುನಾವಣೆ ನಡೆಸುವ ಪ್ರಸ್ತಾಪದ ಹಿಂದೆ ಪಾಕಿಸ್ತಾನ್ ಡೆಮಾಕ್ರಟಿಕ್ ಮೂವ್ಮೆಂಟ್ (ಪಿಡಿಎಂ) ನೇತೃತ್ವದ ಸರ್ಕಾರದ ದುರುದ್ದೇಶವಿದೆ ಎಂದು ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಅಧ್ಯಕ್ಷ ಇಮ್ರಾನ್ ಖಾನ್ ಆರೋಪಿಸಿದ್ದಾರೆ. ಬಜೆಟ್ ಅನ್ನು ಸಾಂಪ್ರದಾಯಿಕವಾಗಿ ಜೂನ್ನ ಮೊದಲ ಎರಡು ವಾರಗಳೊಳಗೆ ಪ್ರಸ್ತುತಪಡಿಸಲಾಗುತ್ತದೆ ಮತ್ತು ಮುಂದಿನ ತಿಂಗಳು ಸಾರ್ವತ್ರಿಕ ಚುನಾವಣೆ ನಡೆಸುವುದು ತುಂಬಾ ಅವಧಿಪೂರ್ವವಾಗುತ್ತದೆ ಎಂದು ಫೆಡರಲ್ ಸರ್ಕಾರವು ಸಮರ್ಥಿಸಿಕೊಂಡಿದೆ. ಹೀಗಾಗಿ ಈ ವರ್ಷ ಕಳೆದ ನಂತರ ಚುನಾವಣೆಗಳನ್ನು ನಡೆಸಲು ಪ್ರಸ್ತುತ ಸರ್ಕಾರ ಒತ್ತು ನೀಡಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ದೇಶಾದ್ಯಂತ ಚುನಾವಣೆ ನಡೆಸುವ ದಿನಾಂಕದ ಕುರಿತು ಸುಪ್ರೀಂ ಕೋರ್ಟ್‌ನ ನಿರ್ದೇಶನದ ಮೇರೆಗೆ ಫೆಡರಲ್ ಸರ್ಕಾರ ಮತ್ತು ವಿರೋಧ ಪಕ್ಷ ಪಿಟಿಐ ಮಾತುಕತೆ ನಡೆಸುತ್ತಿವೆ ಮತ್ತು ಮುಂದಿನ ವಾರ ಅಂತಿಮ ಸಭೆ ನಡೆಯುವ ನಿರೀಕ್ಷೆಯಿದೆ. ಮೇ 14 ರ ಮೊದಲು ಸರ್ಕಾರವು ರಾಷ್ಟ್ರೀಯ ಮತ್ತು ಪ್ರಾಂತೀಯ ಅಸೆಂಬ್ಲಿಗಳನ್ನು ವಿಸರ್ಜಿಸಿದರೆ ಮಾತುಕತೆ ಮುಂದುವರಿಸಲು ತಮ್ಮ ಪಕ್ಷ ಸಿದ್ಧವಾಗಿದೆ ಎಂದು ಪದಚ್ಯುತ ಪ್ರಧಾನಿ ಇಮ್ರಾನ್ ಖಾನ್ ಹೇಳಿದರು.
ಸಿಂಧ್ ಮತ್ತು ಬಲೂಚಿಸ್ತಾನ್ ಅಸೆಂಬ್ಲಿಗಳು ಮತ್ತು ರಾಷ್ಟ್ರೀಯ ಅಸೆಂಬ್ಲಿಯನ್ನು ಇನ್ನೂ ವಿಸರ್ಜಿಸಲಾಗಿಲ್ಲ, ಆದರೆ ಪಂಜಾಬ್ ಮತ್ತು ಖೈಬರ್ ಪಖ್ತುನಖ್ವಾ ಅಸೆಂಬ್ಲಿಗಳನ್ನು ಖಾನ್ ಅವರ ನಿರ್ದೇಶನದ ಮೇರೆಗೆ ಜನವರಿಯಲ್ಲಿ ವಿಸರ್ಜನೆ ಮಾಡಲಾಗಿದೆ. ಪಾಕಿಸ್ತಾನದ ಆರ್ಥಿಕತೆಗೆ ತೀವ್ರ ಪೆಟ್ಟು ನೀಡಿರುವ ನಿರಂತರ ರಾಜಕೀಯ ಬಿಕ್ಕಟ್ಟನ್ನು ಕೊನೆಗಾಣಿಸಲು ಮತ್ತು ಚುನಾವಣೆಗಾಗಿ ಒಮ್ಮತಕ್ಕೆ ಬರುವಂತೆ ನಾಗರಿಕ ಸಮಾಜ ಸಂಘಟನೆಗಳು ಒತ್ತಾಯಿಸಿವೆ. ಬಜೆಟ್ ನಂತರ ಚುನಾವಣೆ ನಡೆಸುವುದಕ್ಕೆ ತಮ್ಮ ಒಪ್ಪಿಗೆ ಇಲ್ಲ ಎಂದಿರುವ ಇಮ್ರಾನ್ ಖಾನ್, ದೇಶದಲ್ಲಿ ಕೂಡಲೇ ಚುನಾವಣೆಗಳನ್ನು ನಡೆಸುವಂತೆ ಒತ್ತಾಯಿಸಿದ್ದಾರೆ. ಚುನಾವಣೆಗಳು ನಡೆಯುವ ಭರವಸೆ ಕಮರಿಹೋದಲ್ಲಿ ಪಾಕಿಸ್ತಾನವು ಶ್ರೀಲಂಕಾ ರೀತಿಯಲ್ಲಿ ಭಯಾನಕ ಬಿಕ್ಕಟ್ಟಿಗೆ ಗುರಿಯಾಗಬಹುದು ಎಂದು ಇಮ್ರಾನ್ ಖಾನ್ ಎಚ್ಚರಿಕೆ ನೀಡಿದ್ದಾರೆ.