ಕಾಬೂಲ್ (ಅಫ್ಘಾನಿಸ್ತಾನ್) :ತಾಲಿಬಾನ್‌ನ ಸರ್ವೋಚ್ಚ ನಾಯಕ ಹಿಬತುಲ್ಲಾ ಅಖುಂಡ್ಜಾದಾ ಅವರು ಅಫ್ಘಾನಿಸ್ತಾನದ ನೂತನ ಹಂಗಾಮಿ ಪ್ರಧಾನ ಮಂತ್ರಿಯಾಗಿ ಮೌಲಾವಿ ಅಬ್ದುಲ್ ಕಬೀರ್ ಅವರನ್ನು ನೇಮಕ ಮಾಡಿದ್ದಾರೆ. ಸದ್ಯದ ಹಂಗಾಮಿ ಪ್ರಧಾನಿ ಮುಲ್ಲಾ ಮೊಹಮ್ಮದ್ ಹಸನ್ ಅಖುಂಡ್ ಅನಾರೋಗ್ಯಪೀಡಿತರಾಗಿದ್ದು, ಅವರು ಚೇತರಿಸಿಕೊಳ್ಳುವವರೆಗೆ ಮೌಲಾವಿ ಅಬ್ದುಲ್ ಕಬೀರ್ ಅವರು ತಾಲಿಬಾನ್ ಸರ್ಕಾರದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. 2021 ರಲ್ಲಿ ತಾಲಿಬಾನ್ ಗುಂಪು ಅಧಿಕಾರಕ್ಕೆ ಮರಳಿದ ನಂತರದಿಂದ ಈವರೆಗೆ ಮುಲ್ಲಾ ಮೊಹಮ್ಮದ್ ಹಸನ್ ಅಖುಂಡ್ ತಾಲಿಬಾನ್ ಸರ್ಕಾರದ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ.
ಮುಲ್ಲಾ ಹಸನ್ ಅವರ ಅನಾರೋಗ್ಯದ ಬಗ್ಗೆ ತಾಲಿಬಾನ್ ಅಧಿಕಾರಿಗಳು ಯಾವುದೇ ವಿವರಗಳನ್ನು ನೀಡಿಲ್ಲವಾದರೂ, ಅವರು ಹೃದ್ರೋಗದಿಂದ ಬಳಲುತ್ತಿದ್ದಾರೆ ಎಂದು ಮೂಲಗಳು ಈ ಹಿಂದೆ ಹೇಳಿದ್ದವು ಎಂದು ಕಾಬೂಲ್ನ ಸ್ಥಳೀಯ ಮಾಧ್ಯಮಗಳು ಹೇಳಿವೆ. ಮೌಲಾವಿ ಅಬ್ದುಲ್ ಕಬೀರ್ ಅವರು ಪೂರ್ವ ಪಕ್ಟಿಕಾ ಪ್ರಾಂತ್ಯದವರಾಗಿದ್ದು, ಅವರು ಝದ್ರಾನ್ ಬುಡಕಟ್ಟಿಗೆ ಸೇರಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇವರು 1996 ರಿಂದ 2001 ರ ಅವಧಿಯಲ್ಲಿ ತಾಲಿಬಾನ್‌ನ ಹಿಂದಿನ ಆಡಳಿತದಲ್ಲಿ ನಂಗರ್‌ಹಾರ್ ಪ್ರಾಂತ್ಯದ ಗವರ್ನರ್ ಆಗಿ ಸೇವೆ ಸಲ್ಲಿಸಿದ್ದಾರೆ. 2001 ರಲ್ಲಿ ತಾಲಿಬಾನ್ ಆಡಳಿತದ ಪತನದ ನಂತರ ಅವರು ಪೇಶಾವರ ಕೌನ್ಸಿಲ್ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದರು ಎಂದು ಹೇಳಲಾಗುತ್ತದೆ.
ಮೌಲಾವಿ ಕಬೀರ್ ತಾಲಿಬಾನ್‌ನ ಹಿರಿಯ ಸದಸ್ಯರಲ್ಲಿ ಒಬ್ಬರಾಗಿದ್ದು, ಕತಾರ್‌ನಲ್ಲಿ ಯುಎಸ್ ಜೊತೆಗಿನ ಗುಂಪಿನ ಮಾತುಕತೆಗಳಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಇದರ ಪರಿಣಾಮವಾಗಿ ಯುಎಸ್ ಮತ್ತು ತಾಲಿಬಾನ್ ನಡುವಿನ ದೋಹಾ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಆಗಸ್ಟ್ 2021 ರಲ್ಲಿ ತಾಲಿಬಾನ್ ಅಧಿಕಾರಕ್ಕೆ ಮರಳಿದ ನಂತರ, ಮೌಲಾವಿ ಕಬೀರ್ ಅವರನ್ನು ಆರಂಭದಲ್ಲಿ ಮುಲ್ಲಾ ಹಸನ್ ಅವರ ಆರ್ಥಿಕ ಉಪ ಸಹಾಯಕರಾಗಿ ಮತ್ತು ನಂತರ ತಾಲಿಬಾನ್ ಪ್ರಧಾನ ಮಂತ್ರಿಯ ರಾಜಕೀಯ ಉಪನಾಯಕರಾಗಿ ನೇಮಿಸಲಾಯಿತು.