ಪೇಶಾವರ(ಪಾಕಿಸ್ತಾನ):ಪೇಶಾವರ ಮಸೀದಿ ಸ್ಫೋಟ ಪ್ರಕರಣ ಪಾಕಿಸ್ತಾನದಲ್ಲಿ ತಲ್ಲಣ ಉಂಟು ಮಾಡಿದೆ. ಅತ್ಯಂತ ಬಿಗಿಭದ್ರತೆ ಹೊಂದಿದ್ದ ಮಸೀದಿಯಲ್ಲಿ ಆತ್ಮಹತ್ಯಾ ಬಾಂಬ್ ಸ್ಫೋಟಗೊಂಡಿರುವುದು ಭದ್ರತಾಲೋಪವನ್ನು ಬಯಲು ಮಾಡಿದೆ. ಘಟನೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 72 ಕ್ಕೆ ಏರಿಕೆಯಾಗಿದೆ. 150ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಮಸೀದಿಯ ಅರ್ಧಭಾಗ ಕುಸಿದು ಅದರಡಿ ಜನರು ಸಿಲುಕಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.
ವಾಯುವ್ಯ ಪೇಶಾವರ ನಗರದಲ್ಲಿ ಸೋಮವಾರ ಮಧ್ಯಾಹ್ನದ ಪ್ರಾರ್ಥನೆಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು. ಇದೇ ವೇಳೆ ತಾಲಿಬಾನ್ ಆತ್ಮಾಹುತಿ ಬಾಂಬರ್ ತನ್ನನ್ನು ತಾನು ಸ್ಫೋಟಿಸಿಕೊಂಡಿದ್ದ. ಸ್ಫೋಟದಲ್ಲಿ ಸಾವಿಗೀಡಾದವರಲ್ಲಿ ಐವರು ಪೊಲೀಸರು, ಮಸೀದಿಯ ಪ್ರಮುಖರಿದ್ದಾರೆ. ಪ್ರಾರ್ಥನೆಗೆ ಸೇರಿದ್ದ ಜನರ ಮುಂದಿನ ಸಾಲಿನಲ್ಲಿದ್ದ ಬಾಂಬರ್ ಸ್ಫೋಟಿಸಿಕೊಂಡಿದ್ದು ಮಸೀದಿ ಛಾವಣಿಯೇ ಜನರ ಮೇಲೆ ಕುಸಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭದ್ರತಾ ಲೋಪ:ಸ್ಫೋಟದ ವೇಳೆ 300 ಪೊಲೀಸರು ಸ್ಥಳದಲ್ಲಿದ್ದರು ಎಂದು ತಿಳಿದು ಬಂದಿದೆ. ನಾಲ್ಕು ಸ್ಥರದ ಭದ್ರತೆಯನ್ನು ಭೇದಿಸಿಕೊಂಡು ಬಾಂಬರ್ ಮಸೀದಿ ಪ್ರವೇಶಿಸಿದ್ದು, ಭಾರಿ ಭದ್ರತಾ ಲೋಪವಾಗಿದೆ. ಮಧ್ಯಾಹ್ನದ ಪ್ರಾರ್ಥನೆಗೆ ಸಾಕಷ್ಟು ಜನರು ಜಮಾಯಿಸುವುದನ್ನು ಮನಗಂಡು ಈ ಕೃತ್ಯ ಎಸಗಲಾಗಿದೆ.
'ಪ್ರತೀಕಾರದ ದಾಳಿ':ಪಾಕಿಸ್ತಾನಿ ತಾಲಿಬಾನ್ ಎಂದು ಕರೆಯಲ್ಪಡುವ ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಆತ್ಮಾಹುತಿ ದಾಳಿಯ ಹೊಣೆ ಹೊತ್ತುಕೊಂಡಿದೆ. ಇದು ಕಳೆದ ಆಗಸ್ಟ್‌ನಲ್ಲಿ ಅಫ್ಘಾನಿಸ್ತಾನದಲ್ಲಿ ಕೊಲ್ಲಲ್ಪಟ್ಟ ಟಿಟಿಪಿ ಕಮಾಂಡರ್ ಉಮರ್ ಖಾಲಿದ್ ಖುರಾಸಾನಿಯ ಸಾವಿಗೆ ಪ್ರತೀಕಾರದ ದಾಳಿಯಾಗಿದೆ ಎಂದು ಅದು ಹೇಳಿದೆ. "ರಕ್ತಕ್ಕೆ ರಕ್ತ ಎಂಬಂತೆ ಒಬ್ಬ ನಾಯಕನ ಬಲಿ ಪಡೆದರೆ ನೂರಾರು ಪ್ರಾಣಗಳನ್ನು ಸಂಘಟನೆ ಆತ್ಮಾಹುತಿ ಪಡೆಯಲಿದೆ" ಎಂದು ಹೇಳಿದೆ.
"ಮಸೀದಿಯ ಒಂದು ಭಾಗ ಪೂರ್ಣ ಕುಸಿದಿದೆ. ಹಲವರು ಇನ್ನೂ ಅವಶೇಷಗಳಡಿ ಸಿಲುಕಿದ್ದಾರೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಕಲ್ಲು ಮಣ್ಣುಗಳಿಂದ ಜನರನ್ನು ಸುರಕ್ಷಿತವಾಗಿ ಹೊರತೆಗೆಯುವುದಕ್ಕೆ ನಮ್ಮ ಮೊದಲ ಆದ್ಯತೆ. ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ" ಎಂದು ರಕ್ಷಣಾಧಿಕಾರಿಗಳು ತಿಳಿಸಿದ್ದಾರೆ.
ಆಸ್ಪತ್ರೆಗೆ ಪ್ರಧಾನಿ, ಸೇನಾ ಮುಖ್ಯಸ್ಥ ಭೇಟಿ:ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಸೋಮವಾರ ಪೇಶಾವರಕ್ಕೆ ತೆರಳಿ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ಪರಿಶೀಲಿಸಿದ್ದಾರೆ. ಸೇನಾ ಮುಖ್ಯಸ್ಥರೊಂದಿಗೆ ಪ್ರಧಾನಿ, ಲೇಡಿ ರೀಡಿಂಗ್ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು. ಬಳಿಕತುರ್ತು ಸಭೆ ನಡೆದಿದೆ. ಈ ಸಂದರ್ಭದಲ್ಲಿ ಬಾಂಬರ್ ಎಲ್ಲಿಂದ ಬಂದ, ಪೊಲೀಸ್ ಭದ್ರತೆ ದಾಟಿ ಮಸೀದಿ ಹೇಗೆ ಪ್ರವೇಶಿಸಿದ ಎಂಬುದರ ಬಗ್ಗೆ ಮಾಹಿತಿ ಸಿಕ್ಕಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಮೃತಪಟ್ಟ 27 ಜನರ ಮೃತದೇಹಗಳನ್ನು ನಿನ್ನೆಯೇ ಸಾಮೂಹಿಕವಾಗಿ ಅಂತ್ಯಕ್ರಿಯೆ ಮಾಡಲಾಗಿದೆ.
'ದಾಳಿಗೂ ಇಸ್ಲಾಂಗೂ ಸಂಬಂಧವಿಲ್ಲ':ಘಟನೆಯನ್ನು ತೀವ್ರವಾಗಿ ಖಂಡಿಸಿದ ಪ್ರಧಾನಿ ಷರೀಫ್, "ದಾಳಿಗೂ ಇಸ್ಲಾಂಗೂ ಯಾವುದೇ ಸಂಬಂಧವಿಲ್ಲ. ಪಾಕಿಸ್ತಾನವನ್ನು ರಕ್ಷಿಸುವ ಜನರನ್ನು ಹೆದರಿಸಲು ಭಯೋತ್ಪಾದಕರು ಇಂತಹ ಕೃತ್ಯವನ್ನು ಎಸಗಿದ್ದಾರೆ. ಸ್ಫೋಟದ ಸಂತ್ರಸ್ತರ ರಕ್ತ ವ್ಯರ್ಥವಾಗಲು ಬಿಡುವುದಿಲ್ಲ. ಇಡೀ ರಾಷ್ಟ್ರವು ಭಯೋತ್ಪಾದನೆಯ ವಿರುದ್ಧವಾಗಿದೆ" ಎಂದು ಹೇಳಿದರು.
ಪೇಶಾವರ ಸ್ಫೋಟದ ನಂತರ ಇಸ್ಲಾಮಾಬಾದ್ ಸೇರಿದಂತೆ ಇತರ ಪ್ರಮುಖ ನಗರಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ರಾಜಧಾನಿಯ ಎಲ್ಲಾ ಪ್ರವೇಶ ಮತ್ತು ನಿರ್ಗಮನ ಸ್ಥಳಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಇಂದು(ಮಂಗಳವಾರ) ದೇಶಾದ್ಯಂತ ಒಂದು ದಿನದ ಶೋಕಾಚರಣೆ ಘೋಷಿಸಲಾಗಿದೆ.
ಇದನ್ನೂ ಓದಿ:ದುಬೈನಿಂದ ಆಕ್ಲೆಂಡ್ಗೆ ಹೊರಟಿದ್ದ ವಿಮಾನ : 13 ಗಂಟೆಗಳ ಹಾರಾಟ ನಡೆಸಿ ಮತ್ತೆ ದುಬೈಗೆ ಆಗಮನ