ಕಾಬೂಲ್:ಅಫ್ಘಾನಿಸ್ತಾನದಲ್ಲಿ ಪ್ರಜಾಪ್ರಭುತ್ವ ಸರ್ಕಾರವನ್ನು ಕೆಡವಿ ಅಧಿಕಾರಕ್ಕೆ ಬಂದಿರುವ ತಾಲಿಬಾನ್ ಸರ್ಕಾರ ಮಹಿಳೆಯರ ಶಿಕ್ಷಣವನ್ನು 6ನೇ ತರಗತಿವರೆಗೆ ನಿರ್ಬಂಧಿಸಿ ಆದೇಶಿಸಿದ ಬಳಿಕ ಇದೀಗ, ಮಹಿಳೆಯರಿಗೆ ಚಾಲನಾ ಪರವಾನಗಿಯನ್ನೂ ನಿಷೇಧಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಕಾಬೂಲ್ ಮತ್ತು ಇತರ ಪ್ರಾಂತ್ಯಗಳಲ್ಲಿ ಮಹಿಳೆಯರಿಗೆ ಡ್ರೈವಿಂಗ್ ಲೈಸೆನ್ಸ್ ನೀಡುವುದನ್ನು ನಿಲ್ಲಿಸಲಾಗಿದೆ. ಕಾಬೂಲ್ ಸೇರಿದಂತೆ ದೇಶದ ಕೆಲವು ಪ್ರಮುಖ ನಗರಗಳಲ್ಲಿ ಮಹಿಳೆಯರು ವಾಹನ ಚಲಾಯಿಸುವುದನ್ನು ಕಾಣಬಹುದು. ತಾಲಿಬಾನ್ ಸರ್ಕಾರ ಇದರ ಮೇಲೆ ನಿರ್ಬಂಧ ವಿಧಿಸಿದ್ದು, ಚಾಲನಾ ಪರವಾನಗಿ ವಿತರಿಸುವುದನ್ನು ನಿಲ್ಲಿಸಿದೆ ಎಂದು ಸ್ಥಳೀಯ ಮಾಧ್ಯಮಗಳು ತಿಳಿಸಿವೆ.
ತಾಲಿಬಾನ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ದೇಶದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಮುಂದುವರಿದಿದೆ. ಅದರಲ್ಲೂ ಮಹಿಳೆಯರ ವಿರುದ್ಧ ಉಗ್ರವಾದಿ ಸರ್ಕಾರ ಇನ್ನಿಲ್ಲದ ನಿಯಮಗಳನ್ನು ಜಾರಿ ಮಾಡುತ್ತಲೇ ಇದೆ. ಮಹಿಳೆಯರಿಗೆ ಆರನೇ ತರಗತಿಗಿಂತ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಹೋಗುವುದನ್ನು ನಿಷೇಧಿಸಿತ್ತು. ಇದು ವಿಶ್ವಾದ್ಯಂತ ಖಂಡನೆಗೆ ಕಾರಣವಾಗಿತ್ತು. ಶಿಕ್ಷಕರ ಕೊರತೆಯ ಕಾರಣ ಈ ರೀತಿ ಮಾಡಲಾಗಿದೆ. ಹೆಚ್ಚಿನ ವಿದ್ಯಾಭ್ಯಾಸ ಮಾಡಲು ಬಯಸುವ ಹೆಣ್ಣುಮಕ್ಕಳಿಗೆ ಅವಕಾಶ ನೀಡಲಾಗುವುದು ಎಂದು ಸರ್ಕಾರ ತಿಳಿಸಿತ್ತು.
ಅಫ್ಘಾನಿಸ್ತಾನ ಗಂಭೀರವಾದ ಮಾನವೀಯ ಬಿಕ್ಕಟ್ಟು ಎದುರಿಸುತ್ತಿದೆ. ದೇಶ ವಿಶ್ವದಲ್ಲೇ ಅತಿ ಹೆಚ್ಚು ತುರ್ತು ಆಹಾರ ಅಭದ್ರತೆಯನ್ನು ಹೊಂದಿದೆ. 95 ಪ್ರತಿಶತದಷ್ಟು ಜನಸಂಖ್ಯೆಯು ಆಹಾರ ಕೊರತೆಯಿಂದ ಬಳಲುತ್ತಿದೆ ಎಂದು ಅಂದಾಜಿಸಲಾಗಿದೆ.
ಇದನ್ನೂ ಓದಿ:ಹೈದರಾಬಾದ್ನಲ್ಲಿ ಮರ್ಯಾದಾ ಹತ್ಯೆ; ಪತ್ನಿಯ ಅಣ್ಣನಿಂದ ವ್ಯಕ್ತಿಯ ಬರ್ಬರ ಹತ್ಯೆ