ಕಾಬೂಲ್ : ಅಫ್ಘಾನಿಸ್ತಾನದ ಪಕ್ಟಿಕಾ ಪ್ರಾಂತ್ಯದಲ್ಲಿ ಕನಿಷ್ಠ 1,000 ಜನರನ್ನು ಬಲಿತೆಗೆದುಕೊಂಡ ಭೂಕಂಪದ ನಂತರ ತಾಲಿಬಾನ್ ನೇತೃತ್ವದ ಸರ್ಕಾರವು ಅಂತಾರಾಷ್ಟ್ರೀಯ ಸಹಾಯಕ್ಕಾಗಿ ಮನವಿ ಮಾಡಿದೆ ಎಂದು ತಿಳಿದು ಬಂದಿದೆ.
ಬುಧವಾರದ ಭೂಕಂಪವು ಎರಡು ದಶಕಗಳಲ್ಲಿ ದೇಶವನ್ನು ಅಪ್ಪಳಿಸಿದ ಅತ್ಯಂತ ಮಾರಣಾಂತಿಕವಾಗಿದೆ ಎಂದು ಪರಿಗಣಿಸಲಾಗಿದೆ. ಭೂಕಂಪನದಿಂದಾದ ಭೂಕುಸಿತಗಳಿಂದ ಗಯಾನ್ ಮತ್ತು ಬರ್ಮಾಲ್ ಎಂಬ ಎರಡು ಜಿಲ್ಲೆಗಳಲ್ಲಿ 1,500 ಜನರು ಗಾಯಗೊಂಡಿದ್ದಾರೆ. ಭೂಕಂಪದ ಕೇಂದ್ರ ಬಿಂದು ಖೋಸ್ಟ್ ನಗರದಿಂದ 44 ಕಿಮೀ ದೂರದಲ್ಲಿ ಕೇಂದ್ರಿಕೃತವಾಗಿದ್ದು, ಪಾಕಿಸ್ತಾನ ಮತ್ತು ಭಾರತದವರೆಗೂ ಕಂಪನದ ಅನುಭವವಾಗಿದೆ ಎಂದು ತಿಳಿದು ಬಂದಿದೆ.
ತಾಲಿಬಾನ್ನ ಹಿರಿಯ ಅಧಿಕಾರಿ ಅಬ್ದುಲ್ ಕಹರ್ ಬಾಲ್ಖಿ ಮಾತನಾಡಿ, ಅಫ್ಘಾನಿಸ್ತಾನವು ನಡೆಯುತ್ತಿರುವ ಮಾನವೀಯ ಮತ್ತು ಆರ್ಥಿಕ ಬಿಕ್ಕಟ್ಟಿನ ಮಧ್ಯೆ ಇರುವುದರಿಂದ ಆಡಳಿತವು ಜನರಿಗೆ ಅಗತ್ಯವಿರುವ ಮಟ್ಟಿಗೆ ಆರ್ಥಿಕವಾಗಿ ಸಹಾಯ ಮಾಡಲು ಅಸಮರ್ಥವಾಗಿದೆ ಎಂದು ಹೇಳಿದ್ದಾರೆ.
ಸಹಾಯ ಸಂಸ್ಥೆಗಳು, ನೆರೆಯ ದೇಶಗಳು ಮತ್ತು ವಿಶ್ವ ಶಕ್ತಿಗಳ ಸಹಾಯದ ಹೊರತಾಗಿಯೂ, ತಮ್ಮ ಸಹಾಯವನ್ನು ಬಹಳ ದೊಡ್ಡ ಪ್ರಮಾಣದಲ್ಲಿ ಮಾಡಬೇಕಾಗಿದೆ. ಏಕೆಂದರೆ ಇದು ದಶಕಗಳಿಂದ ಅನುಭವಿಸದ ವಿನಾಶಕಾರಿ ಭೂಕಂಪವಾಗಿದೆ ಎಂದು ಅವರು ಹೇಳಿದರು.