ಇಸ್ಲಾಮಾಬಾದ್ (ಪಾಕಿಸ್ತಾನ): ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದಲ್ಲಿ ಚೀನಾದ ಎಂಜಿನಿಯರ್ಗಳು ಪ್ರಯಾಣಿಸುತ್ತಿದ್ದ ವಾಹನದ ಮೇಲೆ ಸಶಸ್ತ್ರ ಬಂಡುಕೋರರು ಆತ್ಮಹತ್ಯಾ ದಾಳಿ ನಡೆಸಿರುವ ಘಟನೆ ಭಾನುವಾರ ನಡೆದಿದೆ. ದಾಳಿಯ ಸಂದರ್ಭದಲ್ಲಿ ಬಂದರು ನಗರವಾದ ಗ್ವಾದರ್ನಲ್ಲಿ ಭಾರಿ ಸ್ಫೋಟಗಳು ಮತ್ತು ಗುಂಡಿನ ಸದ್ದು ಕೇಳಿಸಿವೆ. ದಾಳಿ ನಡೆದ ತಕ್ಷಣ ಗ್ವಾದರ್ನಲ್ಲಿನ ಎಲ್ಲ ರಸ್ತೆಗಳನ್ನು ಬಂದ್ ಮಾಡಲಾಗಿತ್ತು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಗ್ವಾದರ್ ನಲ್ಲಿ ಚೀನಾದ ಎಂಜಿನಿಯರ್ಗಳ ಮೇಲೆ ದಾಳಿ ನಡೆದಿರುವುದನ್ನು ಸರ್ಕಾರಿ ಅಧಿಕಾರಿಗಳು ದೃಢಪಡಿಸಿದ್ದಾರೆ ಎಂದು ವರದಿ ತಿಳಿಸಿವೆ. ದಾಳಿಯಲ್ಲಿ ಚೀನಾದ ಯಾವುದೇ ಸಿಬ್ಬಂದಿಯ ಪ್ರಾಣ ಹಾನಿಯಾಗಿಲ್ಲ.
ಚೀನಾದ ಎಂಜಿನಿಯರುಗಳ ಬೆಂಗಾವಲು ವಾಹನದ ಮೇಲೆ ಬೆಳಗ್ಗೆ 9: 30 ರ ಸುಮಾರಿಗೆ ದಾಳಿ ನಡೆದಿದ್ದು, ಸುಮಾರು ಎರಡು ಗಂಟೆಗಳ ಕಾಲ ತೀವ್ರ ಗುಂಡಿನ ಚಕಮಕಿ ನಡೆಯಿತು ಎಂದು ಮಾಧ್ಯಮ ವರದಿಗಳು ಹೇಳಿವೆ. ಅಧಿಕಾರಿಗಳು ಇಡೀ ಗ್ವಾದರ್ ನಗರದಲ್ಲಿ ಹೈ ಅಲರ್ಟ್ ಘೋಷಿಸಿದ್ದಾರೆ ಮತ್ತು ಪ್ರವೇಶ ಮತ್ತು ನಿರ್ಗಮನವನ್ನು ನಿರ್ಬಂಧಿಸಿದ್ದಾರೆ.
ಬಿಎಲ್ಎಯ ಆತ್ಮಹತ್ಯಾ ದಳವಾದ ಬಲೂಚ್ ಲಿಬರೇಶನ್ ಆರ್ಮಿ - ಮಜೀದ್ ಬ್ರಿಗೇಡ್ ಈ ದಾಳಿಯ ಜವಾಬ್ದಾರಿಯನ್ನು ವಹಿಸಿಕೊಂಡಿದೆ. ಬಲೂಚಿಸ್ತಾನ ಮತ್ತು ಸಿಂಧ್ಗಳಲ್ಲಿರುವ ತನ್ನ ನಾಗರಿಕರು ಮುಂದಿನ ಸೂಚನೆ ಬರುವವರೆಗೆ ತಮ್ಮ ಮನೆಗಳಿಂದ ಹೊರಗೆ ಬರಕೂಡದು ಎಂದು ಪಾಕಿಸ್ತಾನದಲ್ಲಿರುವ ಚೀನಾದ ರಾಯಭಾರ ಕಚೇರಿ ಎಚ್ಚರಿಕೆ ನೀಡಿದೆ.
ಪಾಕಿಸ್ತಾನದ ಗ್ವಾದರ್ ಪೊಲೀಸ್ ಠಾಣೆಯ ಬಳಿ ಚೀನಾದ ಎಂಜಿನಿಯರ್ಗಳ ಬೆಂಗಾವಲು ವಾಹನದ ಮೇಲೆ ದಾಳಿ ನಡೆಸಲಾಗಿದೆ ಎಂದು ಚೀನಾದ ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ. ಮೂರು ಎಸ್ ಯುವಿಗಳು ಮತ್ತು ಒಂದು ವ್ಯಾನ್ನ ಬೆಂಗಾವಲು ಪಡೆಯ ವಾಹನಗಳು ಬುಲೆಟ್ ಪ್ರೂಫ್ ಆಗಿದ್ದು, 23 ಚೀನೀ ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿತ್ತು. ದಾಳಿಯ ಸಮಯದಲ್ಲಿ ಐಇಡಿ ಸ್ಫೋಟಗೊಂಡಿದೆ ಮತ್ತು ವ್ಯಾನ್ ಮೇಲೆ ಗುಂಡು ಹಾರಿಸಲಾಗಿದೆ. ದಾಳಿಯಲ್ಲಿ ವಾಹನದ ಗಾಜುಗಳು ಬಿರುಕು ಬಿಟ್ಟಿವೆ ಎಂದು ವರದಿ ತಿಳಿಸಿದೆ.
ಗ್ವಾದರ್ನಲ್ಲಿ ನಡೆದ ಭದ್ರತಾ ಪಡೆಗಳೊಂದಿಗಿನ ಗುಂಡಿನ ಚಕಮಕಿಯಲ್ಲಿ ಇಬ್ಬರು ದಾಳಿಕೋರರು ಸಾವನ್ನಪ್ಪಿದ್ದು, ಇತರ ಮೂವರು ಗಾಯಗೊಂಡಿದ್ದಾರೆ ಎಂದು ಪಾಕಿಸ್ತಾನ ಸೇನೆಯ ಮಾಧ್ಯಮ ವ್ಯವಹಾರಗಳ ವಿಭಾಗ ತಿಳಿಸಿದೆ. ಭದ್ರತಾ ಪಡೆಗಳು ಇಡೀ ಪ್ರದೇಶವನ್ನು ಸುತ್ತುವರೆದಿವೆ ಮತ್ತು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿವೆ ಎಂದು ಅದು ತಿಳಿಸಿದೆ.
ಪಾಕಿಸ್ತಾನದ ಬಲೂಚಿಸ್ತಾನದಲ್ಲಿ ನಿರ್ಮಾಣವಾಗುತ್ತಿರುವ ಗ್ವಾದರ್ ಬಂದರನ್ನು ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ (ಸಿಪಿಇಸಿ) ಯೋಜನೆಯ ಭಾಗವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಆದರೆ ಖನಿಜ ಸಮೃದ್ಧ ಪ್ರಾಂತ್ಯದ ನೈಸರ್ಗಿಕ ಸಂಪನ್ಮೂಲಗಳನ್ನು ದುರುಪಯೋಗಪಡಿಸಿಕೊಳ್ಳಲು ಪಾಕಿಸ್ತಾನದ ಫೆಡರಲ್ ಸರ್ಕಾರಕ್ಕೆ ಇದು ಅನುವು ಮಾಡಿಕೊಡುತ್ತದೆ ಎಂಬ ಕಾರಣದಿಂದ ಬಲೂಚ್ ರಾಷ್ಟ್ರೀಯವಾದಿಗಳು ಈ ಯೋಜನೆಯನ್ನು ವಿರೋಧಿಸುತ್ತಾರೆ. ಬಲೂಚಿಸ್ತಾನವು ಖನಿಜಗಳು, ತೈಲ ಮತ್ತು ಅನಿಲ ಸೇರಿದಂತೆ ನೈಸರ್ಗಿಕ ಸಂಪನ್ಮೂಲಗಳಿಂದ ಸಮೃದ್ಧವಾಗಿದೆ.
ಇದನ್ನೂ ಓದಿ :Luna-25: 47 ವರ್ಷದ ಬಳಿಕ ಚಂದ್ರನಲ್ಲಿಗೆ ಹಾರಿದ ರಷ್ಯಾ ನೌಕೆ; ಚಂದ್ರಯಾನ-3 ಜೊತೆಗೇ ಇಳಿಯಬಹುದು ಲ್ಯಾಂಡರ್!