ಖಾರ್ಟೂಮ್ (ಸುಡಾನ್) : ರಾಜಧಾನಿ ಖಾರ್ಟೂಮ್‌ನ ವಿವಿಧ ಪ್ರದೇಶಗಳಲ್ಲಿ ಹೋರಾಟ ನಿರತ ಸುಡಾನ್ ಸಶಸ್ತ್ರ ಪಡೆಗಳು (ಎಸ್‌ಎಎಫ್) ಮತ್ತು ಅರೆಸೇನಾ ಕ್ಷಿಪ್ರ ಬೆಂಬಲ ಪಡೆಗಳ (ಆರ್‌ಎಸ್‌ಎಫ್) ನಡುವೆ ಹಿಂಸಾತ್ಮಕ ಘರ್ಷಣೆಗಳು ಮುಂದುವರಿದಿವೆ. ಪ್ರತ್ಯಕ್ಷ ಸಾಕ್ಷಿಗಳು ಮತ್ತು ಪ್ರತಿರೋಧ ಸಮಿತಿಗಳ ವರದಿಯ ಪ್ರಕಾರ, ಮುಖ್ಯವಾಗಿ ಪೂರ್ವ ಖಾರ್ಟೂಮ್, ಬಹ್ರಿ (ಖಾರ್ಟೂಮ್ ಉತ್ತರ) ನಗರದ ಉತ್ತರ ಮತ್ತು ಒಮ್ದುರ್ಮನ್ ನಗರದ ಪಶ್ಚಿಮದಲ್ಲಿ ಭಾರಿ ಸಂಘರ್ಷ ನಡೆದಿದೆ.
ಬಹ್ರಿ ನಗರದ ಹತ್ತಿರ ಇಂದು ಘರ್ಷಣೆಗಳು ಪುನಾರಂಭಗೊಂಡಿವೆ. ಆಕಾಶದಲ್ಲಿ ಯುದ್ಧವಿಮಾನಗಳು ಹಾರಾಡುತ್ತಿವೆ. ಬಹ್ರಿಯ ಹಲವಾರು ಪ್ರದೇಶಗಳ ಮೇಲೆ ಬಾಂಬ್ ದಾಳಿ ನಡೆದಿದ್ದು, ಹಲವಾರು ವಸತಿ ಕಟ್ಟಡಗಳಿಗೆ ಹಾನಿಯಾಗಿದೆ. ಆದರೆ, ಇದುವರೆಗೆ ಯಾವುದೇ ಸಾವು ನೋವು ವರದಿಯಾಗಿಲ್ಲ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಓಮ್‌ಡುರ್ಮನ್‌ನ ದಕ್ಷಿಣ ಪ್ರದೇಶದ ಮೇಲೆ ಸುಡಾನ್ ಸೇನೆಯ ಯುದ್ಧವಿಮಾನಗಳು ಹಾರಾಡುತ್ತಿವೆ ಮತ್ತು ನಗರದ ಹಳೆಯ ಭಾಗದಲ್ಲಿ ಘರ್ಷಣೆಗಳು ಮರುಕಳಿಸಿವೆ. ಸೇನೆಯ ಪ್ರಮುಖ ಶಿಬಿರವಾದ ಬಹ್ರಿಯ ಅಲ್ ಕಡಾರೊ ಶಿಬಿರದಲ್ಲಿ ಹಿಂಸಾತ್ಮಕ ಘರ್ಷಣೆಗಳು ನಡೆದಿದ್ದು, ಹಲವಾರು ಸ್ಫೋಟಗಳು ಸಂಭವಿಸಿವೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಸುಡಾನ್ ಬಿಕ್ಕಟ್ಟನ್ನು ಪರಿಹರಿಸಲು ಆಫ್ರಿಕನ್ ಯೂನಿಯನ್ ಪ್ರಸ್ತಾಪಿಸಿದ ಉಪಕ್ರಮವನ್ನು ಸಾರ್ವಭೌಮ ಮಂಡಳಿ ತಿರಸ್ಕರಿಸಿದೆ ಎಂದು ಗುರುವಾರ ಸುಡಾನ್‌ನ ಸಾರ್ವಭೌಮ ಮಂಡಳಿಯ ಉಪಾಧ್ಯಕ್ಷ ಮಲಿಕ್ ಅಗರ್ ಘೋಷಿಸಿದ್ದಾರೆ. ಒಕ್ಕೂಟದಿಂದ ಸುಡಾನ್‌ನ ಸದಸ್ಯತ್ವವನ್ನು ಅಮಾನತುಗೊಳಿಸಿರುವ ಕಾರಣಕ್ಕೆ ತಾವು ಆಫ್ರಿಕನ್ ಯೂನಿಯನ್ ಪ್ರಸ್ತಾಪ ತಿರಸ್ಕರಿಸಿದ್ದಾಗಿ ಅವರು ಹೇಳಿದ್ದಾರೆ.
ಹೋರಾಟವು ಮುಂದುವರಿದಂತೆ ಬಹ್ರಿಯ ನಿವಾಸಿಗಳು ನಿರಂತರ ನೀರಿನ ಕೊರತೆಯಿಂದ ಬಳಲುವಂತಾಗಿದೆ ಮತ್ತು ದಕ್ಷಿಣ ಖಾರ್ಟೂಮ್ನಲ್ಲಿ ಆಹಾರದ ಕೊರತೆ ಎದುರಾಗಿದೆ. ಯುಎನ್ ಆಹಾರ ಮತ್ತು ಕೃಷಿ ಸಂಸ್ಥೆ (ಎಫ್‌ಎಒ) ಸೋಮವಾರ ನೀಡಿದ ವರದಿಯಲ್ಲಿ, ಪ್ರಸ್ತುತ ಸುಡಾನ್ನಲ್ಲಿನ ಬಿಕ್ಕಟ್ಟು ಈಗಾಗಲೇ ಭೀಕರ ಆಹಾರ ಅಭದ್ರತೆಯನ್ನು ಸೃಷ್ಟಿಸಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದಲ್ಲಿ ಆಹಾರ ಕ್ಷಾಮ ಎದುರಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ.
ಸುಡಾನ್ನಲ್ಲಿ ಸಂಕಷ್ಟಕ್ಕೆ ಸಿಲುಕಿರುವ 15 ಮಿಲಿಯನ್ ಜನರ ಸಲುವಾಗಿ ಪರಿಹಾರ ಕಾರ್ಯಾಚರಣೆಗಳನ್ನು ಹೆಚ್ಚಿಸಲು ತಕ್ಷಣವೇ 95.4 ಮಿಲಿಯನ್ ಡಾಲರ್ ಹಣಕಾಸು ನೆರವಿನ ಅಗತ್ಯವಿದೆ ಎಂದು ಯುಎನ್ ಆಹಾರ ಮತ್ತು ಕೃಷಿ ಸಂಸ್ಥೆ ಹೇಳಿದೆ. ವಿಶ್ವಸಂಸ್ಥೆಯ ಮಾನವೀಯ ವ್ಯವಹಾರಗಳ ಸಮನ್ವಯ ವಿಭಾಗದ ಪ್ರಕಾರ, ಏಪ್ರಿಲ್ 15 ರಂದು ಸಂಘರ್ಷ ಪ್ರಾರಂಭವಾದಾಗಿನಿಂದ ಸುಮಾರು 2.5 ಮಿಲಿಯನ್ ಜನರು ಸುಡಾನ್‌ನ ಒಳಗೆ ಮತ್ತು ಹೊರಗೆ ಸ್ಥಳಾಂತರಗೊಂಡಿದ್ದಾರೆ. ಸಶಸ್ತ್ರ ಸಂಘರ್ಷದಲ್ಲಿ ಇದುವರೆಗೆ 3,000 ಕ್ಕೂ ಹೆಚ್ಚು ಜನ ಸಾವಿಗೀಡಾಗಿದ್ದು, 6,000 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ ಎಂದು ಸುಡಾನ್ ಆರೋಗ್ಯ ಸಚಿವಾಲಯ ತಿಳಿಸಿದೆ.
ಇದನ್ನೂ ಓದಿ : ಜರ್ಮನ್ ಮಾಧ್ಯಮ ಸಂಸ್ಥೆ ಆಕ್ಸೆಲ್ ಸ್ಪ್ರಿಂಗರ್ನಲ್ಲಿ ಶೇ 20ರಷ್ಟು ಉದ್ಯೋಗ ಕಡಿತ: ಮಾನವರ ಬದಲು AI ನಿಂದ ಕೆಲಸ!