ಖಾರ್ಟೂಮ್ (ಸುಡಾನ್) : ಸುಡಾನ್ ರಾಜಧಾನಿ ಖಾರ್ಟೂಮ್ನಲ್ಲಿ ನಡೆಯುತ್ತಿರುವ ಸಶಸ್ತ್ರ ಸಂಘರ್ಷ ಮತ್ತಷ್ಟು ಭೀಕರಗೊಂಡಿದೆ. ಅರೆಸೈನಿಕ ಕ್ಷಿಪ್ರ ಬೆಂಬಲ ಪಡೆ (ಆರ್ಎಸ್ಎಫ್) ನೆಲೆಗಳ ಮೇಲೆ ಸುಡಾನ್ ಸಶಸ್ತ್ರ ಪಡೆಗಳು (ಎಸ್ಎಎಫ್) ತಮ್ಮ ವೈಮಾನಿಕ ಮತ್ತು ಫಿರಂಗಿ ದಾಳಿಗಳನ್ನು ಇನ್ನಷ್ಟು ತೀವ್ರಗೊಳಿಸಿವೆ. ಖಾರ್ಟೂಮ್ನ ವಾಯುವ್ಯದಲ್ಲಿರುವ ಒಮ್ದುರ್ಮನ್ ಪ್ರದೇಶದಲ್ಲಿನ ಆರ್ಎಸ್ಎಫ್ ನೆಲೆಗಳ ಮೇಲೆ ಎಸ್ಎಎಫ್ ಯುದ್ಧ ವಿಮಾನಗಳು ವೈಮಾನಿಕ ದಾಳಿ ನಡೆಸಿವೆ ಎಂದು ಖಾರ್ಟೂಮ್ನಲ್ಲಿನ ಮೂಲಗಳನ್ನು ಉಲ್ಲೇಖಿಸಿ ಅಂತರರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಒಮ್ದುರ್ಮನ್ ನ ಪಶ್ಚಿಮದಲ್ಲಿರುವ ಒಂಬಡಾ ಮತ್ತು ದಾರ್ ಅಲ್ ಸಲಾಮ್ ನಂತಹ ನೆರೆಹೊರೆ ಪ್ರದೇಶಗಳು ಮತ್ತು ದಕ್ಷಿಣದಲ್ಲಿ ಅಲ್ ಸಲ್ಹಾ ನೆರೆಹೊರೆಯ ಪ್ರದೇಶಗಳ ಮೇಲೆ ತೀವ್ರ ದಾಳಿ ನಡೆಯುತ್ತಿವೆ.
ಖಾರ್ಟೂಮ್ನ ಉತ್ತರದಲ್ಲಿರುವ ಬಹ್ರಿ ನಗರದ ಅಲ್-ಕದಾರೊ ಹೊರವಲಯದ ಆರ್ಎಸ್ಎಫ್ ನೆಲೆಗಳ ಮೇಲೆ ಸೇನಾ ವಾಯುಪಡೆ ದಾಳಿ ನಡೆಸಿದೆ ಎಂದು ಮೂಲಗಳು ತಿಳಿಸಿವೆ. ಏತನ್ಮಧ್ಯೆ, ದಕ್ಷಿಣ ಖಾರ್ಟೂಮ್ ತುರ್ತು ಸೇವಾ ಕೇಂದ್ರದ ವಕ್ತಾರ ಮೊಹಮ್ಮದ್ ಕಂದಾಶಾ ಶನಿವಾರ ತಮ್ಮ ಫೇಸ್ಬುಕ್ ಪುಟದಲ್ಲಿ ಸೇನಾ ವಾಯುಪಡೆಯು ದಕ್ಷಿಣ ಖಾರ್ಟೂಮ್ನ ಅಲ್-ಇಂಘಾಜ್, ಅಲ್-ಅಝಾರಿ ಮತ್ತು ಅಲ್-ಸಲಾಮಾ ಸುತ್ತಮುತ್ತಲೂ ಮೇಲೆ ತೀವ್ರ ಬಾಂಬ್ ದಾಳಿ ನಡೆಸಿದೆ ಎಂದು ವರದಿ ಮಾಡಿದ್ದಾರೆ.
"ದಕ್ಷಿಣ ಖಾರ್ಟೂಮ್ ಸುತ್ತಮುತ್ತಲಿನ ಪ್ರದೆಶಗಳಲ್ಲಿ ಮುಂಜಾನೆಯಿಂದ ನಿರಂತರ ವಾಯು ಮತ್ತು ಫಿರಂಗಿ ಬಾಂಬ್ ದಾಳಿ ನಡೆಯುತ್ತಿವೆ" ಎಂದು ಕಂದಾಶಾ ಬರೆದಿದ್ದಾರೆ. ಅಲ್-ಅಝಾರಿ ಪ್ರದೆಶದ ಅಲ್-ರಾಜಿ ಆಸ್ಪತ್ರೆಯ ಬಳಿಯ ವಸತಿ ಮತ್ತು ವಾಣಿಜ್ಯ ಸ್ಥಳದ ಮೇಲೆ ನಡೆದ ದಾಳಿಯಿಂದಾಗಿ ಇಬ್ಬರು ಸಾವನ್ನಪ್ಪಿದ್ದಾರೆ ಮತ್ತು ಇತರ ಹತ್ತು ಜನ ಗಾಯಗೊಂಡಿದ್ದಾರೆ.