ಜೆಡ್ಡಾ (ಸೌದಿ ಅರೇಬಿಯಾ):ಸಂಘರ್ಷ ಪೀಡಿತ ಸುಡಾನ್‌ನಿಂದ 121 ಭಾರತೀಯರ ಎಂಟನೇ ಬ್ಯಾಚ್ ಅನ್ನು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ ಮುರಳೀಧರನ್ ಜೆಡ್ಡಾ ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡರು. ಈ ಬ್ಯಾಚ್‌ನಲ್ಲಿ ಭಾರತೀಯ ರಾಯಭಾರಿ ಕಚೇರಿಯ ಅಧಿಕಾರಿಗಳ ಕುಟುಂಬ ಸದಸ್ಯರೂ ಸೇರಿದ್ದಾರೆ. ಅಷ್ಟೇ ಅಲ್ಲ ಮುಂದಿನ 72 ಗಂಟೆಗಳ ಕಾಲ ಸುಡಾನ್‌ನಲ್ಲಿ ಮತ್ತೆ ಕದನ ವಿರಾಮ ಘೋಷಣೆಯಾಗಿದೆ.
ಜೆಡ್ಡಾಗೆ ಬಂದಿಳಿದ ಭಾರತೀಯರು: 121 ಭಾರತೀಯರ 8 ನೇ ಬ್ಯಾಚ್ ಸುಡಾನ್‌ನ ವಾಡಿ ಸಿಡ್ನಾದಿಂದ IAF C 130J ಮೂಲಕ ಜೆಡ್ಡಾ ತಲುಪಿತು. ಈ ಬ್ಯಾಚ್‌ನಲ್ಲಿ ನಮ್ಮ ರಾಯಭಾರ ಕಚೇರಿಯ ಅಧಿಕಾರಿಗಳ ಕುಟುಂಬ ಸದಸ್ಯರೂ ಇದ್ದಾರೆ ಎಂದು ಮುರಳೀಧರನ್ ಟ್ವೀಟ್ ಮಾಡಿದ್ದಾರೆ.
ಇದು ಧೈರ್ಯಶಾಲಿ ಮತ್ತು ಸಂಕೀರ್ಣ ಕಾರ್ಯಾಚರಣೆ ಎಂದು ಬಣ್ಣಿಸಿದ ಕೇಂದ್ರ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಮುರಳೀಧರನ್, ಈ ಬ್ಯಾಚ್‌ನಲ್ಲಿ ಕರೆತರಲಾದ ಜನರು ಸುಡಾನ್ ರಾಜಧಾನಿ ಖಾರ್ಟೂಮ್ ಸುತ್ತಮುತ್ತಲಿನ ಪ್ರದೇಶದಲ್ಲಿ ವಾಸಿಸುತ್ತಿದ್ದರು. ಸುಡಾನ್ ಸಶಸ್ತ್ರ ಪಡೆಗಳು ಮತ್ತು ಕ್ಷಿಪ್ರ ಬೆಂಬಲ ಪಡೆಗಳ ನಡುವೆ ಹೆಚ್ಚಿನ ಹಿಂಸಾಚಾರಗಳು ಈ ಪ್ರದೇಶದಲ್ಲಿ ನಡೆಯುತ್ತಿವೆ. ಅಲ್ಲಿಂದ ಜನರನ್ನು ತರುವುದು ಸುಲಭದ ಮಾತಲ್ಲ ಎಂದು ಹೇಳಿದರು.
ಇದಕ್ಕೂ ಮುನ್ನ ಗುರುವಾರ ಸಚಿವ ವಿ ಮುರಳೀಧರನ್ ಅವರು 'ಆಪರೇಷನ್ ಕಾವೇರಿ' ಅಡಿಯಲ್ಲಿ ಜೆಡ್ಡಾದಲ್ಲಿ ಪೋರ್ಟ್ ಸುಡಾನ್‌ನಿಂದ ರಕ್ಷಿಸಲ್ಪಟ್ಟ ಭಾರತೀಯರನ್ನು ಬರಮಾಡಿಕೊಂಡಿದ್ದರು. ಒಟ್ಟು 135 ಪ್ರಯಾಣಿಕರು ಪೋರ್ಟ್ ಸುಡಾನ್‌ನಿಂದ ಜೆಡ್ಡಾಕ್ಕೆ ಬಂದಿಳಿದ IAF C-130J ವಿಮಾನದಲ್ಲಿದ್ದರು.
ಪೋರ್ಟ್ ಸುಡಾನ್‌ನಲ್ಲಿ ಸಿಲುಕಿರುವ ಭಾರತೀಯ ನಾಗರಿಕರನ್ನು ಸ್ಥಳಾಂತರಿಸುವ ಕುರಿತು ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಗುರುವಾರ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದರು. ಭಾರತೀಯ ವಿಮಾನಗಳು ಜೆಡ್ಡಾಕ್ಕೆ ತೆರಳಿವೆ. ಸಿಕ್ಕಿಬಿದ್ದ ಭಾರತೀಯರ ಏಳನೇ ಬ್ಯಾಚ್ ಪೋರ್ಟ್ ಸುಡಾನ್‌ನಿಂದ ಹೊರಟಿದೆ ಎಂದು ಬಾಗ್ಚಿ ಟ್ವೀಟ್ ಮಾಡಿದ್ದರು.
ಸೇನೆ ಮತ್ತು ಅರೆಸೇನಾ ಪಡೆಗಳ ನಡುವಿನ ಸಂಘರ್ಷದ ಪರಿಣಾಮವಾಗಿ ಸುಡಾನ್ ರಕ್ತಪಾತವನ್ನು ಅನುಭವಿಸುತ್ತಿದೆ. 72 ಗಂಟೆಗಳ ಕದನ ವಿರಾಮದ ಹೊರತಾಗಿಯೂ, ಹಿಂಸಾಚಾರದ ಆರೋಪಗಳಿವೆ. ಸುಡಾನ್ ಸೇನೆಯ ನಾಯಕ ಅಬ್ದೆಲ್ ಫತ್ತಾಹ್ ಅಲ್ - ಬುರ್ಹಾನ್ ಮತ್ತು ಅವರ ಉಪ, ಅರೆಸೇನಾ ಕ್ಷಿಪ್ರ ಬೆಂಬಲ ಸೈನಿಕರ (RSF) ಕಮಾಂಡರ್ ಮೊಹಮದ್ ಹಮ್ದಾನ್ ಡಾಗ್ಲೋ ಅವರಿಗೆ ನಿಷ್ಠರಾಗಿರುವ ಪಡೆಗಳ ನಡುವೆ ಕಾದಾಟ ನಡೆಯುತ್ತಿದೆ.
ಮತ್ತೆ ಕದನ ವಿರಾಮ ಘೋಷಣೆ:ಹಲವು ದಿನಗಳಿಂದ ನಡೆಯುತ್ತಿರುವ ಸಂಘರ್ಷದ ನಡುವೆಯೇ ಸುಡಾನ್‌ನಲ್ಲಿ ಕದನ ವಿರಾಮದ ಬಗ್ಗೆ ವರದಿಯಾಗಿದೆ. ಮಾಹಿತಿಯ ಪ್ರಕಾರ, ಸುಡಾನ್ ಸಶಸ್ತ್ರ ಪಡೆಗಳು ಮತ್ತು ಕ್ಷಿಪ್ರ ಬೆಂಬಲ ಪಡೆ (RSF) 72 ಗಂಟೆಗಳ ಕಾಲ ಕದನ ವಿರಾಮವನ್ನು ಘೋಷಿಸಿದೆ. ಇದನ್ನು ಕ್ವಾಡ್ ದೇಶಗಳು ಜಂಟಿ ಹೇಳಿಕೆ ನೀಡುವ ಮೂಲಕ ಸ್ವಾಗತಿಸಿವೆ.
ಪ್ರಸ್ತುತ ಕದನ ವಿರಾಮವನ್ನು ಹೆಚ್ಚುವರಿ 72 ಗಂಟೆಗಳವರೆಗೆ ವಿಸ್ತರಿಸಲು ಮತ್ತು ಅದರ ಸಂಪೂರ್ಣ ಅನುಷ್ಠಾನಕ್ಕೆ ಕರೆ ನೀಡುವ ಸುಡಾನ್ ಸಶಸ್ತ್ರ ಪಡೆಗಳು ಮತ್ತು ಕ್ಷಿಪ್ರ ಬೆಂಬಲ ಪಡೆಗಳ ಪ್ರಕಟಣೆಯನ್ನು ಕ್ವಾಡ್ ದೇಶಗಳ ಸದಸ್ಯರು ಸ್ವಾಗತಿಸುತ್ತಾರೆ ಎಂದು ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ ಹೊರಡಿಸಿದ ಪ್ರತಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಮಾಧ್ಯಮ ವರದಿಗಳ ಪ್ರಕಾರ, ರಾಜಧಾನಿ ಖಾರ್ಟೂಮ್ ಮತ್ತು ಪಶ್ಚಿಮ ಡಾರ್ಫರ್ ಪ್ರದೇಶದಲ್ಲಿ ನಡೆಯುತ್ತಿರುವ ಹಿಂಸಾಚಾರದ ಮಧ್ಯೆ ಸುಡಾನ್ ಸೇನೆ ಮತ್ತು ಅರೆಸೇನಾ ಕ್ಷಿಪ್ರ ಬೆಂಬಲ ಪಡೆ (RSF) ತಮ್ಮ ಕದನ ವಿರಾಮ ವಿಸ್ತರಿಸಲು ಒಪ್ಪಿಕೊಂಡಿವೆ. ಗುರುವಾರ ಮಧ್ಯರಾತ್ರಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸೌದಿ ಅರೇಬಿಯಾದ ಮತ್ತಷ್ಟು ಮಧ್ಯಸ್ಥಿಕೆ ಪ್ರಯತ್ನಗಳ ನಂತರ ಕದನ ವಿರಾಮವನ್ನು 72 ಗಂಟೆಗಳ ಕಾಲ ವಿಸ್ತರಿಸುವುದಾಗಿ ಸೇನೆ ಹೇಳಿದೆ. ವಿಸ್ತೃತ ಕದನ ವಿರಾಮವನ್ನು ಅನುಮೋದಿಸಿದೆ ಎಂದು ಆರ್ಎಸ್ಎಫ್ ಹೇಳಿದೆ.
ಸುಡಾನ್‌ನಿಂದ ಸಿಲುಕಿರುವ ಭಾರತೀಯ ನಾಗರಿಕರನ್ನು ಮರಳಿ ಕರೆತರಲು ಭಾರತ ಸರ್ಕಾರವು 'ಆಪರೇಷನ್ ಕಾವೇರಿ' ಅನ್ನು ಪ್ರಾರಂಭಿಸಿರುವುದು ಗೊತ್ತಿರುವ ಸಂಗತಿ. ಸುಡಾನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ಸ್ಥಳಾಂತರಿಸುವ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದೆ. ಅಲ್ಲಿಂದ ಇಲ್ಲಿಯವರೆಗೆ ಎಂಟು ಬ್ಯಾಚ್‌ಗಳು ತೆರಳಿದ್ದು, ಜೆಡ್ಡಾ ಮೂಲಕ ಭಾರತಕ್ಕೆ ಅವರನ್ನು ತರಲಾಗುತ್ತಿದೆ. ಸುಡಾನ್‌ನಲ್ಲಿ ಇನ್ನೂ 3 ಸಾವಿರಕ್ಕೂ ಹೆಚ್ಚು ಭಾರತೀಯರು ಸಿಲುಕಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಅಷ್ಟೇ ಅಲ್ಲ ಕೇರಳದ ವ್ಯಕ್ತಿಯೊಬ್ಬರು ಕೂಡ ಗುಂಡಿನ ದಾಳಿಯಿಂದ ಸಾವನ್ನಪ್ಪಿದ್ದಾರೆ. ಸುಡಾನ್‌ನಲ್ಲಿ ಇದುವರೆಗೆ 400 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಜನರು ನೀರು ಮತ್ತು ಆಹಾರದ ಕೊರತೆ ಎದುರಿಸುತ್ತಿರುವುದರ ಬಗ್ಗೆ ಮಾಧ್ಯಮಗಳು ವರದಿ ಮಾಡಿವೆ.
ಓದಿ:ಆಪರೇಷನ್ ಕಾವೇರಿ: ಸುಡಾನ್‌ನಿಂದ 534 ಜನರ ಸ್ಥಳಾಂತರ: ಜೆಡ್ಡಾಕ್ಕೆ ಬಂದಿಳಿದ 3 ತಂಡಗಳು, ಶೀಘ್ರ ಭಾರತಕ್ಕೆ ಪ್ರಯಾಣ