ವಿದ್ಯಾರ್ಥಿಗಳ ಜೀವನದಲ್ಲಿ ಗ್ಯಾಜುಯೇಷನ್ ಡೇ ಎನ್ನುವುದು ಅತ್ಯಂತ ಖುಷಿ ನೀಡುವ ಕ್ಷಣ. ಪ್ರತಿಯೊಬ್ಬರೂ ತಮ್ಮ ಪದವಿ ಸಮಾರಂಭವನ್ನು ತಮ್ಮದೇ ಆದ ವಿಭಿನ್ನ ರೀತಿಯಲ್ಲಿ ಆಚರಿಸುತ್ತಾರೆ. ಕಳೆದ ಮೂರು ವರ್ಷಗಳಲ್ಲಿ ಹಗಲು-ರಾತ್ರೆ ಎನ್ನದೇ ಕಷ್ಟಪಟ್ಟು ಓದಿ ಉತ್ತಮ ಅಂಕಗಳೊಂದಿಗೆ ತಮ್ಮ ಪದವಿ ವ್ಯಾಸಂಗ ಮುಗಿದಿರುವುದನ್ನು ನೆನೆದು ಕೆಲವರಂತೂ ತುಂಬಾ ಭಾವುಕರಾಗುತ್ತಾರೆ. ಆದರೆ, ಚೀನಾದ ವಿದ್ಯಾರ್ಥಿನಿಯೊಬ್ಬಳು ಈ ಕ್ಷಣವನ್ನು ಸಂಚಲನ ಸೃಷ್ಟಿಸುವ ರೀತಿಯಲ್ಲಿ ಸಂಭ್ರಮಿಸಿದ್ದು, ವಿದ್ಯಾರ್ಥಿನಿಯ ವಿಡಿಯೋ ವೈರಲ್ ಆಗಿದೆ.
ಬೀಜಿಂಗ್‌ನ 24 ವರ್ಷದ ಚೆನ್ ಯಿನಿಂಗ್ ಎಂಬ ವಿದ್ಯಾರ್ಥಿನಿ ಜನವರಿಯಲ್ಲಿ ಇಂಗ್ಲೆಂಡ್‌ನ ರೋಹ್ಯಾಂಪ್ಟನ್ ವಿಶ್ವವಿದ್ಯಾನಿಲಯದಿಂದ ಪದವಿ ಪಡೆಯುವ ವೇಳೆ ಕುಂಗ್ ಫೂ ಶೈಲಿಯ ಸೈಡ್ ಫ್ಲಿಪ್ ಅನ್ನು ಪ್ರದರ್ಶಿಸಿದಳು. ಈ ವೇಳೆ ಅಕ್ಕಪಕ್ಕ ಉಪಸ್ಥಿತರಿದ್ದ ಇತರೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಚಪ್ಪಾಳೆ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ, ವಿಡಿಯೋವನ್ನು ಆನ್‌ಲೈನ್‌ನಲ್ಲಿ ಲಕ್ಷಾಂತರ ಮಂದಿ ವೀಕ್ಷಣೆ ಮಾಡಿದ್ದಾರೆ. ಯುವತಿಯ ಆತ್ಮಸ್ಥೈರ್ಯವನ್ನು ನೋಡಿ ಎಲ್ಲರೂ ಬೆಕ್ಕಸ ಬೆರಗಾಗಿ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ (SCMP) ಕೂಡ ಈ ಕುರಿತು ವರದಿ ಮಾಡಿದ್ದು, "ಡ್ಯಾನ್ಸ್ ಪ್ರಾಕ್ಟೀಸ್ ಮತ್ತು ಪರ್ಫಾರ್ಮೆನ್ಸ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದ ಚೆನ್ ಅವರು ಉತ್ಸಾಹದಿಂದ ವೇದಿಕೆ ಮೇಲೆ ಸೈಡ್ ಫ್ಲಿಪ್ ಪ್ರದರ್ಶಿಸಿದ್ದಾರೆ. ಆಕೆಯ ಅಗಾಧ ಆತ್ಮವಿಶ್ವಾಸ ಎಲ್ಲರನ್ನೂ ಅಚ್ಚರಿಗೊಳಿಸಿದೆ" ಎಂದು ತಿಳಿಸಿದೆ. ಮಾರ್ಚ್ 3 ರಂದು ಡೌಯಿನ್‌ನಲ್ಲಿ ಚೆನ್ ಯಿನಿಂಗ್ ತನ್ನ ಪದವಿ ಸಮಾರಂಭದ ವಿಡಿಯೋ ಕ್ಲಿಪ್ ಅನ್ನು ಅಪ್‌ಲೋಡ್ ಮಾಡಿದ ನಂತರ ಲಕ್ಷಾಂತರ ಮಂದಿ ಅವರ ಉತ್ಸಾಹದ ಶೈಲಿಯನ್ನು ಶ್ಲಾಘಿಸಿದ್ದಾರೆ.