ಖೈಬರ್ ಪಖ್ತುಂಖ್ವಾ (ಪಾಕಿಸ್ತಾನ): ಭಾರೀ ಮಳೆಯಿಂದ ಉಂಟಾದ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಪಾಕಿಸ್ತಾನ ಸರ್ಕಾರ ಆಗಸ್ಟ್ 30 ರವರೆಗೆ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸಿದೆ. ಸ್ವಾತ್ ನದಿ ಮತ್ತು ಅದರ ಉಪನದಿಗಳ ಹರಿವಿನ ಮಟ್ಟ 2,27,899 ಕ್ಯೂಸೆಕ್ ತಲುಪಿದ್ದರಿಂದ ಸ್ವಾತ್, ಶಾಂಗ್ಲಾ, ಮಿಂಗೋರಾ, ಕೊಹಿಸ್ತಾನ್ ಮತ್ತು ಇತರ ಪ್ರದೇಶಗಳಲ್ಲಿ ಹಠಾತ್ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.
ಹೋಟೆಲ್‌ಗಳು, ಸಂಪರ್ಕ ರಸ್ತೆಗಳು, ತೂಗು ಸೇತುವೆಗಳು, ಮನೆಗಳು, ಆಸ್ಪತ್ರೆಗಳು, ಶಾಲೆಗಳು, ಮಿನಿ ಪವರ್ ಸ್ಟೇಷನ್‌ಗಳು ಮತ್ತು ನೀರಿನ ಗಿರಣಿಗಳು ಸಂಪೂರ್ಣವಾಗಿ ಕೊಚ್ಚಿಹೋಗುತ್ತಿವೆ. ಈ ಸಂಬಂಧದ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ದಂಡಿಯಾಗಿ ಹರಿದಾಡುತ್ತಿದ್ದು, ಪಾಕಿಸ್ತಾನದಲ್ಲಿನ ಭೀಕರ ಪರಿಸ್ಥಿತಿಗೆ ಕೈಗನ್ನಡಿಯಾಗಿದೆ.
ಭಾರಿ ಮಳೆಗೆ 937 ಜನ ಬಲಿ:ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (ಎನ್‌ಡಿಎಂಎ) ಪ್ರಕಾರ, ಪಾಕಿಸ್ತಾನವು ಆಗಸ್ಟ್‌ನಲ್ಲಿ 166.8 ಮಿಮೀ ಮಳೆಯಾಗಿದೆ. ಸರಾಸರಿ 241 ಶೇಕಡಾ ಮಳೆ ಹೆಚ್ಚಳವಾಗಿದೆ. ಜೂನ್ 14 ರಿಂದ ಪಾಕಿಸ್ತಾನದಾದ್ಯಂತ ಮಳೆ ಮತ್ತು ಪ್ರವಾಹದಿಂದಾಗಿ ಇದುವರೆಗೆ 937 ಜನರು ಸಾವನ್ನಪ್ಪಿದ್ದಾರೆ ಮತ್ತು 1,293 ಜನರು ಗಾಯಗೊಂಡಿದ್ದಾರೆ.
ಪಾಕಿಸ್ತಾನದ ದಕ್ಷಿಣ ಭಾಗದ ಸಿಂಧ್‌ನ 23 ಜಿಲ್ಲೆಗಳನ್ನು ವಿಪತ್ತು ಪೀಡಿತ ಜಿಲ್ಲೆಗಳೆಂದು ಎಂದು ಘೋಷಿಸಲಾಗಿದೆ. ಎನ್ಡಿಎಮ್ಎ ವರದಿ ಪ್ರಕಾರ, ಸಿಂಧ್ ಪ್ರಾಂತ್ಯದಲ್ಲಿ ಮಳೆಯಿಂದ 306 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಬಲೂಚಿಸ್ತಾನದಲ್ಲಿ 234 ಸಾವುಗಳು ವರದಿಯಾಗಿದ್ದು, ಖೈಬರ್ ಪಖ್ತುಂಖ್ವಾ ಮತ್ತು ಪಂಜಾಬ್‌ನಲ್ಲಿ ಕ್ರಮವಾಗಿ 185 ಮತ್ತು 165 ಸಾವುಗಳು ದಾಖಲಾಗಿವೆ.