ಯೆಮೆನ್:ಇಲ್ಲಿನ ಶಾಲೆಯೊಂದರಲ್ಲಿ ಹಣಕಾಸಿನ ನೆರವು ವಿತರಿಸುವ ಕಾರ್ಯಕ್ರಮದಲ್ಲಿ ಸಾವಿರಾರು ಜನರು ಏಕಕಾಲಕ್ಕೆ ನುಗ್ಗಿದ್ದರಿಂದ ನಡೆದ ಕಾಲ್ತುಳಿತದಲ್ಲಿ ಕನಿಷ್ಠ 78 ಮಂದಿ ಸಾವನ್ನಪ್ಪಿ, ನೂರಾರು ಮಂದಿ ಗಾಯಗೊಂಡಿರುವ ದುರ್ಘಟನೆ ನಿನ್ನೆ ರಾತ್ರಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ.
ಬಂಡುಕೋರರ ಗುಂಪು ರಾಜಧಾನಿಯಲ್ಲಿ ಹಣಕಾಸಿನ ನೆರವು ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಇದನ್ನರಿತ ಜನರು ಸಾಗರೋಪಾದಿಯಲ್ಲಿ ಮುತ್ತಿಗೆ ಹಾಕಿದರು. ಭಾರಿ ಸಮೂಹ ಸೇರಿದ್ದರಿಂದ ತಡೆಯುವಲ್ಲಿ ಆಯೋಜಕರು ವಿಫಲರಾಗಿದ್ದಾರೆ. ಜನರ ತಿಕ್ಕಾಟ ಹೆಚ್ಚಾಗಿ ನೆರವು ಪಡೆಯಲು ನಾಮುಂದು ತಾಮುಂದು ಎಂದು ಬಂದಿದ್ದರಿಂದ ಕಾಲ್ತುಳಿತ ಉಂಟಾಗಿದೆ. ಘಟನೆಯಲ್ಲಿ 78 ಮಂದಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಬ್ಯಾಂಕ್ ಪಾಸ್‌ಬುಕ್‌ನಲ್ಲಿ ನಮೂದಾಗುವ ಮೊತ್ತವನ್ನು ವ್ಯಕ್ತಿಯ ಆದಾಯವೆಂದು ಪರಿಗಣಿಸಲಾಗದು: ಹೈಕೋರ್ಟ್
ಆಂತರಿಕ ಸಚಿವಾಲಯದ ಪ್ರಕಾರ, ಸನಾ ಮಧ್ಯಭಾಗದಲ್ಲಿರುವ ಓಲ್ಡ್ ಸಿಟಿಯಲ್ಲಿ ನೂರಾರು ಬಡ ವ್ಯಾಪಾರಿಗಳು ಕಾರ್ಯಕ್ರಮದಲ್ಲಿ ನೆರವು ಪಡೆಯಲು ಒಟ್ಟಿಗೆ ಜಮಾಯಿಸಿದ್ದರು. ನೆರವು ನೀಡಲು ಆಯೋಜನಕರು ಸೂಕ್ತ ವ್ಯವಸ್ಥೆ ಮಾಡಿರಲಿಲ್ಲ. ಜನಸಮೂಹ ಒಂದೇ ಬಾರಿಗೆ ಸೇರಿದ್ದರಿಂದ ನೂಕಾಟ ನಡೆದಿದೆ. ಇದರಿಂದ ಭಾರಿ ದುರಂತ ಸಂಭವಿಸಿದೆ. ಸರ್ಕಾರಿ ಅಧಿಕಾರಿಗಳಿಗೆ ಮಾಹಿತಿ ನೀಡದೇ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ದುರಂತ ಜಾಗ ಸೀಲ್:ಕಾಲ್ತುಳಿತಲ್ಲಿ ಗಾಯಗೊಂಡ ಜನರನ್ನು ಹತ್ತಿರದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಸನಾದಲ್ಲಿನ ಹಿರಿಯ ಆರೋಗ್ಯ ಅಧಿಕಾರಿ ಮೊತಾಹೆರ್ ಅಲ್ ಮರೂನಿ ಅವರು ಜನರು ಸಾವಿನ ಸಂಖ್ಯೆಯನ್ನು ಬಹಿರಂಗಪಡಿಸಿದರು. ದುರಂತದ ಬಳಿಕ ಕಾರ್ಯಕ್ರಮ ಆಯೋಜಿಸಿದ್ದ ಶಾಲೆಯನ್ನು ಪೊಲೀಸರು ತಮ್ಮ ಸುಪರ್ದಿಗೆ ಪಡೆದುಕೊಂಡರು. ಪತ್ರಕರ್ತರು ಸೇರಿದಂತೆ ಜನರ ಪ್ರವೇಶವನ್ನು ನಿರಾಕರಿಸಲಾಗಿದೆ.