ಮಾಸ್ಕೋ (ರಷ್ಯಾ): ರಷ್ಯಾ ಅಧ್ಯಕ್ಷ ವ್ಲಾಡಿಮರ್ ಪುಟಿನ್ ವಿರುದ್ಧವೇ ಗೌಪ್ಯ ಸೇನೆಯಾದ ವ್ಯಾಗ್ನರ್ ಪಡೆ ತಿರುಗಿಬಿದ್ದಿದ್ದು, ಸಶಸ್ತ್ರ ದಂಗೆ ಘೋಷಿಸಿದೆ. ಇದರ ಬೆನ್ನಲ್ಲೇ ವ್ಯಾಗ್ನರ್ ಪಡೆ ಮುಖ್ಯಸ್ಥ ಯೆವ್ನಿನ್ ಪ್ರಿಗೊಝಿನ್ ವಿರುದ್ಧ ಗುಡುಗಿರುವ ಪುಟಿನ್, ಇದನ್ನು ದ್ರೋಹ, ಬೆನ್ನಿಗೆ ಇರಿತ ಎಂದು ಟೀಕಿಸಿದ್ದಾರೆ. ಅಲ್ಲದೇ, ಈ ಸಶಸ್ತ್ರ ದಂಗೆಯಿಂದ ರಷ್ಯಾವನ್ನು ರಕ್ಷಿಸಲಾಗುತ್ತಿದೆ. ದೇಶವನ್ನು ವಿಭಜಿಸುವವರಿಗೆ ಶಿಕ್ಷೆ ಅನಿವಾರ್ಯವಾಗಲಿದೆ ಎಂದು ಪ್ರತಿಜ್ಞೆ ಮಾಡಿದ್ದಾರೆ.
ವ್ಯಾಗ್ನರ್ ಪಡೆ ರಷ್ಯಾದ ಖಾಸಗಿ ಸೇನೆಯಾಗಿದೆ. ಪುಟಿನ್ ಆಪ್ತರಾದ ಯೆವ್ನಿನ್ ಪ್ರಿಗೊಝಿನ್ ಅವರೇ ಇದರ ಮುಖ್ಯಸ್ಥರಾಗಿದ್ದಾರೆ. ಪುಟಿನ್ ಹೇಳಿದಂತೆ ಈ ಸೇನೆ ಕೆಲಸ ಮಾಡುತ್ತಿತ್ತು. ಆದರೆ, ಇದೀಗ ಅದೇ ಪಡೆ ರಷ್ಯಾ ಸೇನೆಯ ವಿರುದ್ಧವೇ ತಿರುಗಿ ಬಿದ್ದಿದೆ. ಇದರಿಂದ ರಷ್ಯಾದಲ್ಲಿ ಬಿಕ್ಕಟ್ಟು ಸೃಷ್ಟಿಯಾಗಿದೆ. ಅಲ್ಲದೇ, ಎರಡು ದಶಕಗಳಲ್ಲಿ ಅಧಿಕಾರಾವಧಿಯಲ್ಲಿ ಪುಟಿನ್ ಅವರಿಗೆ ಎದುರಾದ ದೊಡ್ಡ ಬೆದರಿಕೆ ಎನ್ನಲಾಗುತ್ತಿದೆ. ಹೀಗಾಗಿ ಇಂದು ರಷ್ಯಾವನ್ನು ಉದ್ದೇಶಿಸಿ ಅಧ್ಯಕ್ಷ ಪುಟಿನ್ ಮಾತನಾಡಿದ್ದಾರೆ.
ವ್ಯಾಗ್ನರ್ ಪಡೆಯ ಹೆಸರನ್ನು ಉಲ್ಲೇಖಿಸದೇ ಪುಟಿನ್, ಕೆಲವು ರಷ್ಯನ್ನರು ಕ್ರಿಮಿನಲ್ ಸಾಹಸಕ್ಕೆ ಮೋಸ ಹೋಗಿದ್ದಾರೆ. ದಂಗೆಕೋರರ ಈ ಕ್ರಮವನ್ನು ಬೆನ್ನಿಗೆ ಇರಿತವಾಗಿದೆ. ದೇಶವನ್ನು ವಿಭಜಿಸುವವರಿಗೆ ಶಿಕ್ಷೆಯಾಗುತ್ತದೆ. ಕೆಲವರ ಹೆಚ್ಚಿನ ಮಹತ್ವಾಕಾಂಕ್ಷೆಯು ದೇಶದ್ರೋಹಕ್ಕೆ ಕಾರಣವಾಗಿದೆ. ಬಿಕ್ಕಟ್ಟು ಎದುರಿಸಲು ಅಗತ್ಯವಿರುವ ಎಲ್ಲ ರೀತಿಯ ಆದೇಶಗಳನ್ನು ನೀಡಲಾಗಿದೆ ಎಂದು ಹೇಳಿದ್ದಾರೆ. ಆಶ್ಚರ್ಯಕರವಾಗಿ ಪುಟಿನ್ ತಮ್ಮ ಭಾಷಣದ ಕೊನೆಯಲ್ಲಿ ವ್ಯಾಗ್ನರ್ ಪಡೆಯನ್ನು ಉಲ್ಲೇಖಿಸಿದ್ದಾರೆ. ಅದು ಮಾಸ್ಕೋಗಾಗಿ ಹೋರಾಡಿದ್ದಕ್ಕಾಗಿ ವ್ಯಾಗ್ನರ್ ಪಡೆಯನ್ನು ಹೊಗಳಲು ಮಾತ್ರ ಸೀಮಿತವಾಗಿತ್ತು ಎಂದು ವರದಿಯಾಗಿದೆ.