ನವದೆಹಲಿ: ಅಯೋಧ್ಯೆಯಲ್ಲಿ ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆಯ ದಿನವಾದ ಜನವರಿ 22ರಂದು ಮಾರಿಷಸ್ ಸರ್ಕಾರ ತನ್ನ ಉದ್ಯೋಗಿಗಳಿಗೆ 2 ಗಂಟೆಗಳ ಅವಧಿಯ ವಿಶೇಷ ರಜೆ ಮಂಜೂರು ಮಾಡಿದೆ. ಪ್ರಾಣ ಪ್ರತಿಷ್ಠಾಪನೆಯ ಅಂಗವಾಗಿ ಸ್ಥಳೀಯವಾಗಿ ನಡೆಯುವ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡುವ ಸಲುವಾಗಿ ಹಿಂದೂ ಧರ್ಮೀಯರಿಗೆ ಈ ವಿಶೇಷ ರಜಾ ಸೌಲಭ್ಯ ನೀಡಲಾಗಿದೆ.
"ಭಾರತದಲ್ಲಿ ಅಯೋಧ್ಯೆ ರಾಮ ಮಂದಿರದ ಉದ್ಘಾಟನೆಯ ಸಂದರ್ಭದಲ್ಲಿ, ಸೇವೆಯ ಅವಶ್ಯಕತೆಗಳಿಗೆ ಒಳಪಟ್ಟು, 2024ರ ಜನವರಿ 22ರ ಸೋಮವಾರ ಹಿಂದೂ ಧರ್ಮದ ಸಾರ್ವಜನಿಕ ಅಧಿಕಾರಿಗಳಿಗೆ ಮಧ್ಯಾಹ್ನ 2 ಗಂಟೆಯಿಂದ ಎರಡು ಗಂಟೆಗಳ ವಿಶೇಷ ರಜೆ ನೀಡಲು ಕ್ಯಾಬಿನೆಟ್ ಒಪ್ಪಿಕೊಂಡಿದೆ. ಪ್ರಾಣ ಪ್ರತಿಷ್ಠಾಪನೆ ಸಮಾರಂಭವು ಅಯೋಧ್ಯೆಯಲ್ಲಿ ಭಗವಾನ್ ರಾಮನ ಮರಳುವಿಕೆಯನ್ನು ಸಂಕೇತಿಸುವ ಐತಿಹಾಸಿಕ ಘಟನೆಯಾಗಿದೆ" ಎಂದು ಮಾರಿಷಸ್ ಸರ್ಕಾರ ಹೇಳಿಕೆಯಲ್ಲಿ ತಿಳಿಸಿದೆ.
ಅಯೋಧ್ಯೆಯ ಭವ್ಯವಾದ ದೇವಾಲಯದ ಗರ್ಭಗುಡಿಯಲ್ಲಿ ಭಗವಾನ್ ರಾಮನ 'ಪ್ರಾಣ ಪ್ರತಿಷ್ಠಾ' ಬಗ್ಗೆ ದೇಶಾದ್ಯಂತ ಉತ್ಸಾಹ ಹೆಚ್ಚುತ್ತಿದೆ. ಜನವರಿ 22ರಂದು ಪ್ರತಿಷ್ಠಾಪನಾ ಸಮಾರಂಭ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಪ್ರಮುಖ ಗಣ್ಯರು ಭಾಗವಹಿಸಲಿದ್ದಾರೆ. ಪ್ರತಿಷ್ಠಾಪನಾ ಸಮಾರಂಭವು ನ್ಯೂಯಾರ್ಕ್ ನಗರದ ಟೈಮ್ಸ್ ಸ್ಕ್ವೇರ್ ನಲ್ಲಿ ನೇರ ಪ್ರಸಾರವಾಗಲಿದೆ. 2020 ರಲ್ಲಿ ಭೂಮಿ ಪೂಜೆ ಸಮಾರಂಭದ ನಂತರ ಟೈಮ್ಸ್ ಸ್ಕ್ವೇರ್ ಜಾಹೀರಾತು ಫಲಕಗಳಲ್ಲಿ ಭಗವಾನ್ ಶ್ರೀರಾಮನನ್ನು ಪ್ರದರ್ಶಿಸುತ್ತಿರುವುದು ಇದು ಎರಡನೇ ಬಾರಿಯಾಗಿದೆ.