ಕೊಲಂಬೊ(ಶ್ರೀಲಂಕಾ): ಶ್ರೀಲಂಕಾದ ಅಧ್ಯಕ್ಷ ಗೊತಬಯ ರಾಜಪಕ್ಸ ಹಾಗೂ ಪ್ರಧಾನಿ ವಿಕ್ರಮಸಿಂಘೆ ಅವರ ನಿವಾಸಗಳಿಗೆ ನಿನ್ನೆ ಪ್ರತಿಭಟನಾಕಾರರು ಸಹಸ್ರಾರು ಸಂಖ್ಯೆಯಲ್ಲಿ ಮುತ್ತಿಗೆ ಹಾಕಿದ್ದು, ಪರಾರಿಯಾಗಿದ್ದ ರಾಜಪಕ್ಸ ಈಗ ಎಲ್ಲಿದ್ದಾರೆ ಎಂಬುದು ಇದುವರೆಗೂ ತಿಳಿದು ಬಂದಿಲ್ಲ. ಪರಾರಿಯಾದ ನಂತರ ಸಂಸತ್ತಿನ ಸ್ಪೀಕರ್ ಜೊತೆ ಸಂಪರ್ಕದಲ್ಲಿದ್ದ ಅವರು ಬುಧವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿದ್ದರು.
ಶ್ರೀಲಂಕಾ ಅಧ್ಯಕ್ಷರ ಮನೆಗೆ ಪ್ರತಿಭಟನಾಕಾರರ ಮುತ್ತಿಗೆ, ರಾಜಪಕ್ಸ ಪತ್ತೆ ಇಲ್ಲ
ಶ್ರೀಲಂಕಾ ಪ್ರಧಾನಿ ಹಾಗೂ ಅಧ್ಯಕ್ಷರ ನಿವಾಸಗಳ ಮೇಲೆ ನಡೆದ ಹಿಂಸಾತ್ಮಕ ಪ್ರತಿಭಟನೆಯ ವೇಳೆ 102 ಮಂದಿ ಗಾಯಗೊಂಡಿದ್ದಾರೆ. ಈ ಪೈಕಿ 11 ಮಂದಿ ಮಾಧ್ಯಮ ಸಿಬ್ಬಂದಿ ಎಂದು ತಿಳಿದುಬಂದಿದೆ.
ಸ್ಪೀಕರ್ ಮಹಿಂದಾ ಯಾಪ ಅಬೇವರ್ಧನ ಶನಿವಾರ ರಾತ್ರಿ ರಾಜಪಕ್ಸ ತಮ್ಮ ಅಧ್ಯಕ್ಷ ಸ್ಥಾನಕ್ಕೆ ಬುಧವಾರ ರಾಜೀನಾಮೆ ನೀಡುತ್ತಾರೆ ಎಂದು ಘೋಷಿಸಿದ್ದರು. ಶನಿವಾರ ಸಂಜೆ ನಡೆದ ನಾಯಕರ ಸರ್ವಪಕ್ಷ ಸಭೆಯ ನಂತರ ಅಬೇವರ್ಧನ್, ರಾಜಪಕ್ಸ ಅವರಿಗೆ ರಾಜೀನಾಮೆ ನೀಡುವಂತೆ ಬರೆದ ಪತ್ರಕ್ಕೆ ರಾಜಪಕ್ಸ ಪ್ರತಿಕ್ರಿಯಿಸಿದ್ದರು. ವಿಕ್ರಮ್ ಸಿಂಘೆ ಈಗಾಗಲೇ ಹೊಸ ಸರ್ಕಾರಕ್ಕೆ ದಾರಿ ಮಾಡಿಕೊಡುವುದಾಗಿ ಹೇಳಿ ರಾಜೀನಾಮೆ ಪ್ರಕಟಿಸಿದ್ದಾರೆ. ರಾಷ್ಟ್ರಪತಿ ಹಾಗೂ ಪ್ರಧಾನಮಂತ್ರಿ ಇಬ್ಬರ ಅನುಪಸ್ಥಿತಿಯಲ್ಲಿ ಮಧ್ಯಂತರ ಸರ್ಕಾರ ರಚನೆಯಾಗುವವರೆಗೆ ಸ್ಪೀಕರ್ ಹಂಗಾಮಿ ಅಧ್ಯಕ್ಷರಾಗಿರಲಿದ್ದು, ನಂತರ ನೂತನ ಅಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಯಲಿದೆ.
ಇದನ್ನೂ ಓದಿ:ಪ್ರಧಾನಿ ಹುದ್ದೆಗೆ ರಾನಿಲ್ ವಿಕ್ರಮಸಿಂಘೆ ರಾಜೀನಾಮೆ, ಪಿಎಂ ಖಾಸಗಿ ನಿವಾಸಕ್ಕೆ ಬೆಂಕಿ