ಕೊಲಂಬೊ:ಪ್ರಮುಖ ಆರ್ಥಿಕ ಶಕ್ತಿಯಾದ ಪ್ರವಾಸೋದ್ಯಮದ ತೀವ್ರ ಕುಸಿತ ಮತ್ತು ಅತಿಯಾದ ಸಾಲದಿಂದಾಗಿ ದಿವಾಳಿಯಾಗಿರುವ ದ್ವೀಪರಾಷ್ಟ್ರ ಶ್ರೀಲಂಕಾ, ಪುನಶ್ಚೇತನ ಕಾಣಲು ಮಿತ್ರರಾಷ್ಟ್ರ ಮತ್ತು ಹೆಚ್ಚು ಪ್ರವಾಸಿಗರು ಭೇಟಿ ನೀಡುವ ಭಾರತ, ಚೀನಾ, ಜಪಾನ್ ಸೇರಿದಂತೆ 6 ರಾಷ್ಟ್ರಗಳಿಗೆ 'ಉಚಿತ ಪ್ರವಾಸಿ ವೀಸಾ' ಘೋಷಿಸಿದೆ.
ಭಾರತದ ಜತೆಗೆ ಆರು ದೇಶಗಳ ಪ್ರವಾಸಿಗರಿಗೆ ಉಚಿತ ಪ್ರವಾಸಿ ವೀಸಾ ನೀಡುವ ನೀತಿಗೆ ಶ್ರೀಲಂಕಾ ಕ್ಯಾಬಿನೆಟ್ ಅನುಮೋದನೆ ನೀಡಿದೆ. ಸಾಲದ ಸುಳಿಯಲ್ಲಿ ಸಿಲುಕಿರುವ ದ್ವೀಪ ರಾಷ್ಟ್ರದ ಪ್ರವಾಸೋದ್ಯಮ ಕ್ಷೇತ್ರವನ್ನು ಮರುನಿರ್ಮಾಣ ಮಾಡುವ ಪ್ರಯತ್ನಗಳ ಭಾಗವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಲಂಕಾ ವಿದೇಶಾಂಗ ಸಚಿವ ಅಲಿ ಸಬ್ರಿ ಮಂಗಳವಾರ ತಿಳಿಸಿದರು.
ಇದನ್ನು ಪ್ರಾಯೋಗಿಕ ಯೋಜನೆಯಾಗಿ ಮಾರ್ಚ್ 31, 2024 ರವರೆಗೆ ಜಾರಿಗೆ ತರಲಾಗುವುದು. ಭಾರತ, ಚೀನಾ, ರಷ್ಯಾ, ಮಲೇಷ್ಯಾ, ಜಪಾನ್, ಇಂಡೋನೇಷ್ಯಾ ಮತ್ತು ಥಾಯ್ಲೆಂಡ್‌ನ ಪ್ರಯಾಣಿಕರಿಗೆ ತಕ್ಷಣದಿಂದಲೇ ಜಾರಿಗೆ ಬರುವಂತೆ ದೇಶಕ್ಕೆ ಉಚಿತ ಪ್ರವೇಶವನ್ನು ನೀಡಲು ಸರ್ಕಾರ ಅನುಮತಿ ನೀಡಿದೆ ಎಂದು ವಿದೇಶಾಂಗ ಇಲಾಖೆ ಹೇಳಿದೆ.
ಪಟ್ಟಿ ಮಾಡಲಾದ ದೇಶಗಳಿಂದ ಲಂಕಾಗೆ ಬರುವ ಪ್ರವಾಸಿಗರು ಯಾವುದೇ ಶುಲ್ಕವಿಲ್ಲದೆ ಪ್ರವಾಸಿ ವೀಸಾಗಳನ್ನು ಪಡೆಯಬಹುದು. ಭಾರತವು ದ್ವೀಪರಾಷ್ಟ್ರದ ಪ್ರಮುಖ ಪ್ರವಾಸಿ ರಾಷ್ಟವಾಗಿದೆ. ಆದ್ಯತೆಯ ಪ್ರವಾಸೋದ್ಯಮ ಮಾರುಕಟ್ಟೆ ಕೂಡ ಹೌದು ಎಂದು ಹೇಳಿದೆ.
ಭಾರತದ ಪ್ರವಾಸಿಗರೇ ಹೆಚ್ಚು:ದ್ವೀಪರಾಷ್ಟ್ರ ಶ್ರೀಲಂಕಾಗೆ ಭೇಟಿ ನೀಡಿದವರ ಪೈಕಿ ಭಾರತದ ಪ್ರವಾಸಿಗರೇ ಹೆಚ್ಚಿದ್ದಾರೆ. ಸೆಪ್ಟೆಂಬರ್ ಅಂಕಿಅಂಶಗಳ ಪ್ರಕಾರ, ಭಾರತದಿಂದ ಶೇ.26 ರಷ್ಟು ಅಂದರೆ 30 ಸಾವಿರಕ್ಕೂ ಅಧಿಕ ಜನರು ಅಲ್ಲಿಗೆ ಭೇಟಿ ನೀಡಿ ಅಗ್ರಸ್ಥಾನದಲ್ಲಿದ್ದಾರೆ. ಚೀನೀ ಪ್ರವಾಸಿಗರು 8 ಸಾವಿರಕ್ಕೂ ಹೆಚ್ಚು ಜನರು ಆಗಮಿಸಿ ಎರಡನೇ ಸ್ಥಾನದಲ್ಲಿದ್ದಾರೆ.
ಹೊಡೆತ ನೀಡಿದ ಬಾಂಬ್ ದಾಳಿ:ಭಯೋತ್ಪಾದನೆ ದಾಳಿ, ಆಂತರಿಕ ಕ್ಷೋಭೆಯನ್ನು ಕಂಡಿರದ ರಾಷ್ಟ್ರವಾಗಿದ್ದ ಲಂಕಾ ಮೊದಲ ಬಾರಿಗೆ 2019 ರಲ್ಲಿ ಈ ಆಘಾತವನ್ನು ಅನುಭವಿಸಿತು. ಈಸ್ಟರ್ ಸಂಡೆ ದಿನದಂದು ಚರ್ಚ್ ಮತ್ತಿತರ ಕಡೆ ಬಾಂಬ್ ದಾಳಿ ನಡೆದು, 11 ಭಾರತೀಯರು ಸೇರಿದಂತೆ 270 ಜನರು ಹತರಾಗಿದ್ದರು. 500 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಇದಾದ ನಂತರ ದ್ವೀಪಕ್ಕೆ ಪ್ರವಾಸಿಗರ ಆಗಮನವು ಪಾತಾಳಕ್ಕೆ ಕುಸಿದಿದೆ.
1948 ರಲ್ಲಿ ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆದ ನಂತರ ಅತ್ಯಂತ ಕನಿಷ್ಠ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ದೇಶ, ಅಧ್ಯಕ್ಷ ರಾಜಪಕ್ಸೆ ಅವರ ರಾಜೀನಾಮೆಗೆ ಒತ್ತಾಯಿಸಿ ನಡೆದ ದೊಡ್ಡ ದಂಗೆಯನ್ನೂ ಕಂಡಿತು. ಆರ್ಥಿಕ ಸಂಕಷ್ಟಕ್ಕೆ ಸಿಲುಕಿಸಿದ ಸರ್ಕಾರದ ವಿರುದ್ಧ ಜನರು ಬೀದಿಗಿಳಿದು ರಾಜಕೀಯ ಕ್ರಾಂತಿ ನಡೆಸಿದ್ದರು.
ಆರ್ಥಿಕ ಬಿಕ್ಕಟ್ಟು, ಆಹಾರ, ಔಷಧಿ, ಅಡುಗೆ ಅನಿಲ, ಇತರ ಇಂಧನ, ಟಾಯ್ಲೆಟ್ ಪೇಪರ್ ಮತ್ತು ಬೆಂಕಿಕಡ್ಡಿಗಳಂತಹ ಅಗತ್ಯ ವಸ್ತುಗಳ ತೀವ್ರ ಕೊರತೆಯನ್ನು ಅನುಭವಿಸಿತು. ಇಂಧನ ಮತ್ತು ಅಡುಗೆ ಅನಿಲವನ್ನು ಖರೀದಿಸಲು ಜನರು ತಿಂಗಳುಗಟ್ಟಲೆ ಅಂಗಡಿಗಳ ಮುಂದೆ ಸರತಿ ಸಾಲಿನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಎದುರಿಸಿತ್ತು.
ಇದನ್ನೂ ಓದಿ:ಲಂಕಾ ಬಂದರಿಗೆ ಬಂದ ಚೀನಾ ಬೇಹುಗಾರಿಕಾ ಹಡಗು: ಭಾರತದ ಆಕ್ಷೇಪ