ಕರ್ನಾಟಕ

karnataka

ETV Bharat / international

ಪಾತಾಳಕ್ಕೆ ಕುಸಿದ ಶ್ರೀಲಂಕಾ ಆರ್ಥಿಕತೆ: ತುರ್ತುಪರಿಸ್ಥಿತಿ ಘೋಷಿಸಿದ ಗೊಟಬಯ ರಾಜಪಕ್ಸೆ - ಗೊಟಾಬಯ ರಾಜಪಕ್ಸೆ ರಾಜೀನಾಮೆಗೆ ಒತ್ತಾಯ

ಶ್ರೀಲಂಕಾದಲ್ಲಿ ಆರ್ಥಿಕತೆ ಪಾತಾಳಕ್ಕೆ ಇಳಿದಿದ್ದು, ಸರ್ಕಾರದ ವಿರುದ್ಧ ನಾಗರಿಕರು ಬೀದಿಗಿಳಿದಿದ್ದಾರೆ. ಈ ಬೆನ್ನಲ್ಲೇ ಶ್ರೀಲಂಕಾದ ಅಧ್ಯಕ್ಷ ಗೊಟಬಯ ರಾಜಪಕ್ಸೆ ತುರ್ತು ಪರಿಸ್ಥಿತಿ ಘೋಷಣೆ ಮಾಡಿದ್ದಾರೆ.

Sri Lanka president declares emergency amid protests
ಪಾತಾಳಕ್ಕೆ ಕುಸಿದ ಶ್ರೀಲಂಕಾ ಆರ್ಥಿಕತೆ: ತುರ್ತುಪರಿಸ್ಥಿತಿ ಘೋಷಣೆ ಗೊಟಬಯ ರಾಜಪಕ್ಸೆ

By

Published : Apr 2, 2022, 10:45 AM IST

ಕೊಲಂಬೋ(ಶ್ರೀಲಂಕಾ): ಭಾರತದ ನೆರೆಯ ರಾಷ್ಟ್ರವಾದ ಶ್ರೀಲಂಕಾದಲ್ಲಿ ಆರ್ಥಿಕತೆ ಪಾತಾಳಕ್ಕೆ ಇಳಿದಿದೆ. ಇದರಿಂದಾಗಿ ಸರ್ಕಾರದ ವಿರುದ್ಧ ನಾಗರಿಕರು ಬೀದಿಗಿಳಿದಿದ್ದು, ಕೆಲವು ಪಕ್ಷ ಮತ್ತು ಸಂಘಟನೆಗಳು ದೇಶವ್ಯಾಪಿ ಪ್ರತಿಭಟನೆಗೆ ಕರೆ ನೀಡಿವೆ. ಶ್ರೀಲಂಕಾದ ಅಧ್ಯಕ್ಷ ಗೊಟಬಯ ರಾಜಪಕ್ಸೆ ರಾಜೀನಾಮೆಗೆ ಜನರು ಆಗ್ರಹಿಸುತ್ತಿದ್ದಾರೆ. ಈ ಬೆನ್ನಲ್ಲೇ ರಾಜಪಕ್ಸೆ ಶನಿವಾರ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಿದ್ದಾರೆ. ತುರ್ತು ಪರಿಸ್ಥಿತಿ ಘೋಷಣೆ ಮಾಡುವುದರ ಜೊತೆಗೆ ಕೆಲವೊಂದು ಸಾರ್ವಜನಿಕ ಭದ್ರತೆಯ ಸುಗ್ರೀವಾಜ್ಞೆಗಳನ್ನು ಜಾರಿಗೊಳಿಸಿದ್ದಾರೆ. ಈ ಸುಗ್ರೀವಾಜ್ಞೆಗಳು ಸಾರ್ವಜನಿಕ ಭದ್ರತೆ, ಸಾರ್ವಜನಿಕ ಸುವ್ಯವಸ್ಥೆಯ ಸಂರಕ್ಷಣೆ, ದಂಗೆ, ಗಲಭೆ ಅಥವಾ ನಾಗರಿಕ ಗಲಭೆಯನ್ನು ನಿಗ್ರಹಿಸಲು ಮತ್ತು ಅನೇಕ ಕಾನೂನುಗಳನ್ನು ಮಾಡಲು ಅಧಿಕಾರ ನೀಡುತ್ತದೆ.

ಈಗ ಹೇರಿರುವ ತುರ್ತು ಪರಿಸ್ಥಿತಿ ಮೂಲಕ ಯಾರ ಬಂಧನಕ್ಕಾದರೂ ಅಧ್ಯಕ್ಷರು ಆದೇಶ ನೀಡಬಹುದು. ಯಾವುದೇ ಆಸ್ತಿಯನ್ನು ಸ್ವಾಧೀನಪಡಿಸಿಕೊಳ್ಳಬಹುದು. ಯಾವುದೇ ಸ್ಥಳದಲ್ಲಿ ಶೋಧ ಕಾರ್ಯವನ್ನು ನಡೆಸಬಹುದಾಗಿದೆ. ಇದರ ಜೊತೆಗೆ ಅಧ್ಯಕ್ಷರು ಯಾವುದೇ ಕಾನೂನನ್ನು ಬದಲಾಯಿಸಬಹುದು ಅಥವಾ ಅಮಾನತುಗೊಳಿಸಬಹುದಾಗಿದೆ. ಶುಕ್ರವಾರ ಅಧ್ಯಕ್ಷ ಗೊಟಬಯ ರಾಜಪಕ್ಸೆ ನಿವಾಸದ ಮುಂದೆ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಹಲವರನ್ನು ಬಂಧಿಸಲಾಗಿತ್ತು. ಈ ಬೆನ್ನಲ್ಲೇ ತುರ್ತು ಪರಿಸ್ಥಿತಿಯನ್ನು ಗೊಟಬಯ ರಾಜಪಕ್ಸೆ ಘೋಷಿಸಿದ್ದಾರೆ.

ಭಾನುವಾರ ಶ್ರೀಲಂಕಾದಾದ್ಯಂತ ಸರ್ಕಾರದ ವಿರುದ್ಧ ಸಾರ್ವಜನಿಕ ಪ್ರತಿಭಟನೆಗೆ ಕರೆ ನೀಡಲಾಗಿದೆ. ಗುರುವಾರ ರಾತ್ರಿಯ ನಡೆದ ಪ್ರತಿಭಟನೆಯಲ್ಲಿ ಸಾವಿರಾರು ಮಂದಿ ಪ್ರತಿಭಟನಾಕಾರರು ಭಾಗವಹಿಸಿದ್ದು, ಈ ಪ್ರತಿಭಟನಾಕಾರರಲ್ಲಿ ಉಗ್ರಗಾಮಿಗಳೂ ಇದ್ದಾರೆಂದು ರಾಜಪಕ್ಸೆ ಕಚೇರಿ ಆರೋಪ ಮಾಡಿದೆ. ಪ್ರತಿಭಟನೆ ವೇಳೆ ಪೊಲೀಸರು ಅಶ್ರುವಾಯು ಮತ್ತು ಜಲಫಿರಂಗಿ ಪ್ರಯೋಗಿಸಿದ್ದು, 54 ಮಂದಿಯನ್ನು ಬಂಧಿಸಿದ್ದಾರೆ. ಹತ್ತಾರು ಮಂದಿ ಗಾಯಗೊಂಡಿದ್ದಾರೆ.

ರಾಜಧಾನಿ ಕೊಲಂಬೊದ ಉಪನಗರಗಳಲ್ಲಿ ಜಾರಿಗೊಳಿಸಲಾಗಿದ್ದ ಪೊಲೀಸ್ ಕರ್ಫ್ಯೂವನ್ನು ಶುಕ್ರವಾರ ಬೆಳಗ್ಗೆ ಹಿಂತೆಗೆದುಕೊಳ್ಳಲಾಗಿದೆ. ದೀರ್ಘಾವಧಿಯ ವಿದ್ಯುತ್ ಕಡಿತ ಮತ್ತು ಅಗತ್ಯ ವಸ್ತುಗಳ ಕೊರತೆಯಿಂದಾಗಿ ಪ್ರತಿಭಟನಾಕಾರರು ರಾಜಪಕ್ಸೆ ವಿರುದ್ಧ ಪ್ರತಿಭಟನೆಗೆ ಇಳಿದಿದ್ದಾರೆ. ಶ್ರೀಲಂಕಾದಲ್ಲಿ ಸಾಲ ಹೆಚ್ಚಾಗಿದ್ದು, ವಿದೇಶಿ ಮೀಸಲು ಕಡಿಮೆಯಾಗುತ್ತಿದೆ. ಜನರು ಇಂಧನಕ್ಕಾಗಿ ಉದ್ದನೆಯ ಸಾಲುಗಳಲ್ಲಿ ಕಾಯುವ ಪರಿಸ್ಥಿತಿ ಉಂಟಾಗಿದೆ. ವಿದ್ಯುತ್ ಉತ್ಪಾದಿಸುವ ಸ್ಥಾವರಗಳನ್ನು ನಿರ್ವಹಿಸಲು ಸಾಕಷ್ಟು ಇಂಧನದ ಕೊರತೆ ಉಂಟಾಗಿದೆ. ಮಳೆಯ ಕೊರತೆ ಜಲವಿದ್ಯುತ್ ಸಾಮರ್ಥ್ಯವನ್ನು ಕುಗ್ಗಿಸಿರುವುದರಿಂದ ಪ್ರತಿದಿನ ಹಲವಾರು ಗಂಟೆಗಳ ಕಾಲ ವಿದ್ಯುತ್ ಕಡಿತಗೊಳ್ಳುತ್ತಿದೆ.

ಇದನ್ನೂ ಓದಿ:ರಷ್ಯಾದ ಮೇಲೆಯೇ ವಾಯುದಾಳಿ ನಡೆಸಿದ ಉಕ್ರೇನ್​...ಇದು ಮೊದಲ ಏರ್​ಸ್ಟ್ರೈಕ್​ ಎಂದ ರಷ್ಯಾ

ABOUT THE AUTHOR

...view details