ಕೊಲಂಬೊ(ಶ್ರೀಲಂಕಾ) :ತೀವ್ರ ಆರ್ಥಿಕ ಬಿಕ್ಕಟ್ಟಿನಿಂದಾಗಿ ನೆರೆಯ ದೇಶ ಶ್ರೀಲಂಕಾ ಸಂಪೂರ್ಣವಾಗಿ ಕಂಗೆಟ್ಟು ಹೋಗಿದೆ. ಇನ್ನಿಲ್ಲದ ಸಮಸ್ಯೆ ಅನುಭವಿಸುವಂತಾಗಿದೆ. ಇದೀಗ ಶ್ರೀಲಂಕಾದಲ್ಲಿ ಇಂಧನ ಕೊರತೆ ಸಹ ಉಂಟಾಗಿದ್ದು,ಕಾರಣ ರಾಷ್ಟ್ರವ್ಯಾಪಿ 10 ಗಂಟೆಗಳ ಕಾಲ ದೈನಂದಿನ ವಿದ್ಯುತ ಕಡಿತ ಮಾಡಿದೆ. ವಿದೇಶಿ ವಿನಿಮಯದ ಕೊರತೆಯಿಂದಾಗಿ ಶ್ರೀಲಂಕಾ ತೀವ್ರ ಆರ್ಥಿಕ ಮತ್ತು ಇಂಧನ ಬಿಕ್ಕಟ್ಟು ಎದುರಿಸುತ್ತಿದೆ. ಈಗಾಗಲೇ ಅಗತ್ಯ ವಸ್ತುಗಳ ಬೆಲೆಯಲ್ಲಿ ಗಣನೀಯ ಮಟ್ಟದ ಏರಿಕೆ ಕಂಡು ಬಂದಿದೆ.
ಶ್ರೀಲಂಕಾದ ಲೋಕೋಪಯೋಗಿ ಆಯೋಗ ಇಂದಿನಿಂದ ಪ್ರತಿದಿನ 10 ಗಂಟೆಗಳ ಕಾಲ ವಿದ್ಯುತ್ ಕಡಿತಗೊಳಿಸುವುದಾಗಿ ಪ್ರಕಟಣೆ ಹೊರಡಿಸಿದೆ. ಜಲವಿದ್ಯುತ್ ಹಾಗೂ ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ವಿದ್ಯುತ್ ಉತ್ಪಾದನೆ ಕಡಿಮೆಯಾಗಿರುವ ಕಾರಣ ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದೆ. ಉಷ್ಣ ವಿದ್ಯುತ್ ಉತ್ಪಾದನೆ ಮಾಡಲು ಸರಿಯಾಗಿ ಇಂಧನ ಲಭ್ಯವಾಗುತ್ತಿಲ್ಲವಾದರಿಂದ 750 ಮೆಗಾವ್ಯಾಟ್ ವಿದ್ಯುತ್ ಕೊರತೆ ಉಂಟಾಗಿದೆ ಎಂದು ಲೋಕೋಪಯೋಗಿ ಆಯೋಗದ ಅಧ್ಯಕ್ಷ ಜನಕ ರತ್ನಾಯಕ್ ತಿಳಿಸಿದ್ದಾರೆ.