ನವದೆಹಲಿ: ತನ್ನ ದೇಶದ ಪಶ್ಚಿಮ ಕರಾವಳಿಯಲ್ಲಿ ಕಡಲು ಸಂಶೋಧನೆ ನಡೆಸಲು ಚೀನಾದ ಹಡಗಿಗೆ 48 ಗಂಟೆಗಳ ಕಾಲಾವಕಾಶ ನೀಡಲಾಗಿದೆ ಎಂದು ಶ್ರೀಲಂಕಾದ ವಿದೇಶಾಂಗ ಸಚಿವಾಲಯ ಭಾನುವಾರ ತಿಳಿಸಿದೆ. ಬುಧವಾರದಿಂದ ಕೊಲಂಬೊ ಬಂದರಿನಲ್ಲಿರುವ ಚೀನಾದ ಸಂಶೋಧನಾ ಹಡಗು ಶಿ ಯಾನ್ 6 ಗೆ ಸೋಮವಾರದಿಂದ ಎರಡು ದಿನಗಳ ಕಾಲ ಸಂಶೋಧನಾ ಕಾರ್ಯಾಚರಣೆ ನಡೆಸಲು ಅವಕಾಶ ನೀಡಲಾಗುವುದು ಎಂದು ಸಚಿವಾಲಯದ ವಕ್ತಾರ ಕಪಿಲಾ ಫೊನ್ಸೆಕಾ ಹೇಳಿದ್ದಾರೆ. ಶ್ರೀಲಂಕಾ ಬಂದರಿನಲ್ಲಿ ಚೀನಾ ಹಡಗುಗಳು ಲಂಗರು ಹಾಕುವುದಕ್ಕೆ ಭಾರತದ ತೀವ್ರ ಆಕ್ಷೇಪದ ನಡುವೆಯೂ ಶ್ರೀಲಂಕಾ ಇಂಥ ಕ್ರಮಕ್ಕೆ ಮುಂದಾಗಿದೆ.
ಪ್ರಸ್ತುತ ಲಂಗರು ಹಾಕಿರುವ ಚೀನಾ ಹಡಗು ಶ್ರೀಲಂಕಾದ ಪಶ್ಚಿಮ ಸಮುದ್ರ ತೀರದಲ್ಲಿ ಎರಡು ದಿನಗಳ ಸಂಶೋಧನಾ ಚಟುವಟಿಕೆ ನಡೆಸಲಿದ್ದು, ಇದರಲ್ಲಿ ಸ್ಥಳೀಯ ವಿಜ್ಞಾನಿಗಳು ಕೂಡ ಶಿ ಯಾನ್ 6 ನಲ್ಲಿ ಇರಲಿದ್ದಾರೆ ಎಂದು ಫೊನ್ಸೆಕಾ ಹೇಳಿದ್ದಾರೆ.
ಈ ಹಿಂದೆಯೂ ಚೀನಾ ಹಡಗು ಕೊಲಂಬೊ ಬಂದರಿಗೆ ಆಗಮಿಸಲು ಶ್ರೀಲಂಕಾ ಅನುಮತಿ ನೀಡಿತ್ತು. ಈ ಹಡಗು ತನ್ನ ವಿರುದ್ಧ ಗೂಢಚಾರಿಕೆ ನಡೆಸುವ ಸಾಧ್ಯತೆಗಳಿವೆ ಎಂದು ಭಾರತ ಆತಂಕ ವ್ಯಕ್ತಪಡಿಸಿತ್ತು. ಹಿಂದೂ ಮಹಾಸಾಗರದಲ್ಲಿ ಚೀನಾದ ಹೆಚ್ಚುತ್ತಿರುವ ಉಪಸ್ಥಿತಿ ಮತ್ತು ಶ್ರೀಲಂಕಾದಲ್ಲಿ ಅದರ ಪ್ರಭಾವದ ಬಗ್ಗೆ ನವದೆಹಲಿ ತೀವ್ರ ಕಳವಳ ವ್ಯಕ್ತಪಡಿಸಿದೆ.