ಕೊಲಂಬೋ:ಪ್ರವಾಸೋದ್ಯಮವನ್ನೇ ನಂಬಿರುವ ದೇಶವಾದ ದ್ವೀಪರಾಷ್ಟ್ರ ಶ್ರೀಲಂಕಾ ಇನ್ನಿಲ್ಲದ ಆರ್ಥಿಕ ಹೊಡೆತಕ್ಕೆ ಸಿಲುಕಿದೆ. ಕೊರೊನಾ ಸೋಂಕಿನ ದಾಳಿಯ ಬಳಿಕ ಆರ್ಥಿಕ ವ್ಯವಸ್ಥೆ ಬುಡಮೇಲಾಗಿದೆ. ಪೆಟ್ರೋಲ್, ಡೀಸೆಲ್, ದಿನಬಳಕೆ ವಸ್ತುಗಳು ಸೇರಿದಂತೆ ಎಲ್ಲವೂ ತುಟ್ಟಿಯಾಗಿದೆ. ಇದು ಅಲ್ಲಿನ ಜನರನ್ನು ಹೈರಾಣಾಗಿಸಿದೆ. ಅಲ್ಲದೇ ಜನರು ಆರ್ಥಿಕ ಹೊಡೆತಕ್ಕೆ ನಲುಗಿ ದೇಶ ತೊರೆಯುತ್ತಿದ್ದಾರೆ.
ಈ ಮಧ್ಯೆಯೇ ಇಂದು ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಮಹಿಂದಾ ರಾಜಪಕ್ಸೆ, ದೇಶದ ಆರ್ಥಿಕ ದುಸ್ಥಿತಿಯನ್ನು ಹೋಗಲಾಡಿಸಲು ಸರ್ಕಾರ ಹಗಲಿರುಳು ಕೆಲಸ ಮಾಡುತ್ತಿದೆ. ಪ್ರತಿಭಟನಾಕಾರರು ತಮ್ಮ ಆಂದೋಲನವನ್ನು ಕೈಬಿಡಬೇಕು. ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುವುದರ ಮೂಲಕ ಬಿಕ್ಕಟ್ಟು ಶಮನವಾಗುವುದಿಲ್ಲ. ಸರ್ಕಾರ ಈ ಬಗ್ಗೆ ಎಲ್ಲ ಕ್ರಮಗಳನ್ನು ಕೈಗೊಂಡಿದೆ. ಸಂಕಷ್ಟದ ಸಮಯದಲ್ಲಿ ಜನರು ದೇಶದ ಜೊತೆ ಕೈ ಜೋಡಿಸಬೇಕು ಎಂದು ಮನವಿ ಮಾಡಿದ್ದಾರೆ.
ಜನರು ಇಂತಹ ಬಿಕ್ಕಟ್ಟಿನ ಸಮಯದಲ್ಲಿ ಜವಾಬ್ದಾರಿಯಿಂದ ವರ್ತಿಸಬೇಕು. ದೇಶದಲ್ಲಿರುವ ಸಮಸ್ಯೆಗಳ ಸಂಪೂರ್ಣ ಜವಾಬ್ದಾರಿಯನ್ನು ಸರ್ಕಾರ ತೆಗೆದುಕೊಳ್ಳುತ್ತದೆ. ಸರ್ಕಾರದ ವಿರುದ್ಧ ರಸ್ತೆಗಿಳಿದು ಪ್ರತಿಭಟನೆ ಮಾಡುತ್ತಿರುವುದು ಸರಿಯಲ್ಲ. ಕೊರೊನಾ ವಿರುದ್ಧ ಹೋರಾಡಲು ಸರ್ಕಾರ ಏನೆಲ್ಲಾ ಕಠಿಣ ಕ್ರಮಗಳನ್ನು ಕೈಗೊಂಡಿದೆ. ಅದನ್ನೆಲ್ಲಾ ಹಾಳು ಮಾಡಬೇಡಿ. ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಿರುವ ಎಲ್ಲ ಮಾರ್ಗೋಪಾಯಗಳನ್ನು ಕಂಡುಕೊಳ್ಳಲಾಗುವುದು. ಜನರು ಸಹಕಾರ ನೀಡಬೇಕು ಎಂದು ಕೋರಿದ್ದಾರೆ.
ಮಧ್ಯಂತರ ಸರ್ಕಾರಕ್ಕೆ ಪ್ರಸ್ತಾಪ: ಸಂಪುಟದ 26 ಮಂತ್ರಿಗಳು ರಾಜೀನಾಮೆ ನೀಡಿದ್ದು, ಹೊಸ ಮಂತ್ರಿಗಳ ನೇಮಕ ಮಾಡುವುದು ಪ್ರಧಾನಿ ಮಹಿಂದಾ ರಾಜಪಕ್ಸರಿಗೆ ಸವಾಲಾಗಿದೆ. ಈ ಮಧ್ಯೆಯೇ ಮಧ್ಯಂತರ ಸರ್ಕಾರ ರಚನೆಗೆ ಪ್ರತಿಪಕ್ಷಗಳು ಮುಂದಾಗಿವೆ.
ಈಗಿನ ಬಿಕ್ಕಟ್ಟಿನಿಂದ ಪಾರಾಗಲು ಅಧ್ಯಕ್ಷ ಗೋಟಬಯ ರಾಜಪಕ್ಸೆ ಅವರು ಸರ್ವಪಕ್ಷಗಳ ನೇತೃತ್ವದಲ್ಲಿ ಹೊಸ ಸರ್ಕಾರ ರಚನೆ ಮಾಡುವ ಪ್ರಸ್ತಾಪವನ್ನು ಮುಂದಿಟ್ಟಿದ್ದಾರೆ. ಸದ್ಯಕ್ಕೆ ಮಧ್ಯಂತರ ಸರ್ಕಾರ ರಚನೆ ಮಾಡಿ ಬಿಕ್ಕಟ್ಟು ಶಮನಗೊಳಿಸುವುದು ಈಗಿನ ತುರ್ತು ಅಗತ್ಯವಾಗಿದೆ.