ಕೊಲಂಬೊ: ಶ್ರೀಲಂಕಾದಲ್ಲಿ ಈ ವರ್ಷ ಇದುವರೆಗೆ ಒಟ್ಟು 50,264 ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ ಎಂದು ಅಲ್ಲಿನ ಆರೋಗ್ಯ ಸಚಿವಾಲಯ ಬುಧವಾರ ತಿಳಿಸಿದೆ. ದ್ವೀಪ ರಾಷ್ಟ್ರದ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಗಂಪಹಾ ಜಿಲ್ಲೆಯಲ್ಲಿ ಅತಿ ಹೆಚ್ಚು ಪ್ರಕರಣಗಳು ಕಂಡುಬಂದಿವೆ ಎಂದು ಸಚಿವಾಲಯದ ಸಾಂಕ್ರಾಮಿಕ ರೋಗಶಾಸ್ತ್ರ ಘಟಕ ತಿಳಿಸಿದೆ.
43 ಡೆಂಗ್ಯೂ ಅಪಾಯಕಾರಿ ಪ್ರದೇಶಗಳನ್ನು ಗುರುತಿಸಿ ಸೊಳ್ಳೆ ನಿರ್ಮೂಲನಾ ಅಭಿಯಾನವನ್ನು ನಡೆಯುತ್ತಿದೆ. 2023ರಲ್ಲಿ ಇಲ್ಲಿಯವರೆಗೆ ಒಟ್ಟು 31 ಡೆಂಗ್ಯೂ ಸಂಬಂಧಿತ ಸಾವುಗಳು ವರದಿಯಾಗಿವೆ ಎಂದು ಘಟಕ ತಿಳಿಸಿದೆ. ಏತನ್ಮಧ್ಯೆ, ಮುಂದಿನ ದಿನಗಳಲ್ಲಿ ಭಾರಿ ಮಳೆಯಾಗಲಿದ್ದು, ಸೊಳ್ಳೆಗಳ ಉತ್ಪತ್ತಿಗೆ ಉತ್ತೇಜನ ನೀಡಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ. ಅಧಿಕೃತ ಮಾಹಿತಿಯ ಪ್ರಕಾರ ಶ್ರೀಲಂಕಾದಲ್ಲಿ ಕಳೆದ ವರ್ಷ 76,000 ಡೆಂಗ್ಯೂ ಪ್ರಕರಣಗಳು ದಾಖಲಾಗಿದ್ದವು.
ಕೇರಳದಲ್ಲೂ ಹೆಚ್ಚಿದ ಡೆಂಗ್ಯೂ:ನೆರೆಯ ರಾಜ್ಯ ಕೇರಳದಲ್ಲೂ ಡೆಂಗ್ಯೂ ಪ್ರಕರಣ ಹೆಚ್ಚಾಗತೊಡಗಿವೆ. 2022ರಲ್ಲಿನ ಪ್ರಕರಣಗಳಿಗೆ ಹೋಲಿಸಿದರೆ 2023ರ ಆರು ತಿಂಗಳಲ್ಲೇ 132% ಹೆಚ್ಚಳವನ್ನು ಕಂಡಿದೆ. ರಾಜ್ಯದಲ್ಲಿ 2023ರ ಜನವರಿ 1 ರಿಂದ ಜೂನ್ 28 ರವರೆಗೆ 3,409 ಪ್ರಕರಣಗಳು ದೃಢಪಟ್ಟಿದ್ದು, 10,038 ಶಂಕಿತ ಪ್ರಕರಣಗಳು ವರದಿಯಾಗಿವೆ.
2022 ರಲ್ಲಿ ದೃಢಪಡಿಸಿದ ಡೆಂಗ್ಯೂ ಪ್ರಕರಣಗಳ ಸಂಖ್ಯೆ 1,472 ಇತ್ತು. ಶಂಕಿತ ಪ್ರಕರಣಗಳ ಸಂಖ್ಯೆ 4,311 ರಷ್ಟಿತ್ತು. 2020 ರಲ್ಲಿ, 1,045 ದೃಢ ಪ್ರಕರಣ ಮತ್ತು 4,819 ಶಂಕಿತ ಪ್ರಕರಣಗಳು ವರದಿಯಾಗಿದ್ದವು. ಇವಕ್ಕೆ ಹೋಲಿಸದರೇ 2023ರಲ್ಲಿ ಕೇವಲ ಆರು ತಿಂಗಳಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಾಗಿವೆ.
ಡೆಂಗ್ಯೂ ಜ್ವರವು ಸಾಂಕ್ರಾಮಿಕ ರೋಗವಾಗಿದ್ದು, ತೀವ್ರ ಎಚ್ಚರಿಕೆಯ ಅಗತ್ಯವಿರುತ್ತದೆ. ಡೆಂಗ್ಯೂ ಜ್ವರ ಸೇರಿದಂತೆ ಯಾವುದೇ ಜ್ವರವು ಸಾಂಕ್ರಾಮಿಕವಾಗಬಹುದು. ಆದ್ದರಿಂದ ತೀವ್ರ ಅಥವಾ ದೀರ್ಘಕಾಲದ ಜ್ವರಗಳಿಗೆ ವೈದ್ಯಕೀಯ ಚಿಕಿತ್ಸೆ ಪಡೆಯಬೇಕು.