ವಾಷಿಂಗ್ಟನ್: ಹೆಚ್ 1ಬಿ ವೀಸಾ ಹೊಂದಿರುವವರ ಸಂಗಾತಿಗಳು ಅಮೆರಿಕದಲ್ಲಿ ಉದ್ಯೋಗ ಮಾಡಬಹುದೆಂದು ಯುಎಸ್ ಜಿಲ್ಲಾ ನ್ಯಾಯಾಲಯ ತೀರ್ಪು ನೀಡಿದೆ. ಇಲ್ಲಿನ ಜಿಲ್ಲಾ ನ್ಯಾಯಾಧೀಶರಾದ ತಾನ್ಯಾ ಚುಟ್ಕಾನ್ ಅವರು ಸೇವ್ ಜಾಬ್ಸ್ ಯುಎಸ್ಎ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ ಈ ತೀರ್ಪು ನೀಡಿದ್ದಾರೆ. ಇದರಿಂದ ಅಮೆರಿಕದಲ್ಲಿ ತಂತ್ರಜ್ಞಾನ ಕ್ಷೇತ್ರದಲ್ಲಿ ಉದ್ಯೋಗ ಮಾಡುತ್ತಿರುವ ವಿದೇಶಿಗರಿಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ.
ಸೇವ್ ಜಾಬ್ಸ್ ಯುಎಸ್ಎ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಜಿಲ್ಲಾ ನ್ಯಾಯಾಲಯ ಈ ತೀರ್ಪು ನೀಡಿತು. ಸೇವ್ ಜಾಬ್ಸ್ ಯುಎಸ್ಎ, ಹೆಚ್1ಬಿ ವೀಸಾ ಹೊಂದಿರುವವರ ಸಂಗಾತಿಗಳಿಗೆ (ಪತಿ ಅಥವಾ ಪತ್ನಿ) ಉದ್ಯೋಗದ ಅಧಿಕೃತ ಕಾರ್ಡ್ಗಳನ್ನು ನೀಡುವ ಒಬಾಮಾ ಆಡಳಿತಾವಧಿಯ ನಿಯಮಗಳನ್ನು ವಜಾಗೊಳಿಸುವಂತೆ ಕೋರಿ ನ್ಯಾಯಾಲಯದ ಮೆಟ್ಟಿಲೇರಿತ್ತು. ಸೇವ್ ಜಾಬ್ಸ್ ಯುಎಸ್ಎ ಸಲ್ಲಿಸಿದ್ದ ಅರ್ಜಿಯನ್ನು ಟೆಕ್ ದೈತ್ಯ ಕಂಪನಿಗಳಾದ ಅಮೆಜಾನ್, ಆಪಲ್, ಗೂಗಲ್ ಮತ್ತು ಮೈಕ್ರೋಸಾಫ್ಟ್ ಖಂಡಿಸಿದ್ದವು. ಯುಎಸ್ ಇದುವರೆಗೆ ಸುಮಾರು 1 ಲಕ್ಷ ಉದ್ಯೋಗ ಕಾರ್ಡ್ಗಳನ್ನು ಹಂಚಿಕೆ ಮಾಡಿದ್ದು, ಇದರಲ್ಲಿ ಭಾರತೀಯರು ಅತಿ ಸಂಖ್ಯೆಯಲ್ಲಿದ್ದಾರೆ.
ಸೇವ್ ಜಾಬ್ಸ್ ಯುಎಸ್ಎ ತನ್ನ ವಾದದಲ್ಲಿ, ಹೆಚ್4 ವೀಸಾ ಹೊಂದಿರುವ ವಿದೇಶಿ ಪ್ರಜೆಗಳಿಗೆ ಅಮೆರಿಕಾದಲ್ಲಿ ಕೆಲಸ ಮಾಡಲು ಹೋಮ್‌ಲ್ಯಾಂಡ್ ಸೆಕ್ಯುರಿಟಿ ಅಧಿಕಾರವನ್ನು ನೀಡಿಲ್ಲ ಎಂದು ಹೇಳಿದೆ. ಅಲ್ಲದೆ ವಿವಿಧ ವೀಸಾಗಳಲ್ಲಿ ಉದ್ಯೋಗವನ್ನು ಅಧಿಕೃತಗೊಳಿಸಲು ಸರ್ಕಾರವು ಮುಕ್ತ ಅಧಿಕಾರವನ್ನು ಹೊಂದಿದೆ. ಡಿಪಾರ್ಟ್‌ಮೆಂಟ್ ಆಫ್ ಹೋಮ್‌ಲ್ಯಾಂಡ್ ಸೆಕ್ಯುರಿಟಿ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ ಅವರ ಸಂಗಾತಿ ಮತ್ತು ಅವಲಂಬಿತರಿಗೆ ಉದ್ಯೋಗವನ್ನು ಅಧಿಕೃತಗೊಳಿಸಿದ್ದಾರೆ ಎಂದು ನ್ಯಾಯಾಲಯ ಹೇಳಿದೆ. ವಿದೇಶಿ ಸರ್ಕಾರಿ ಅಧಿಕಾರಿಗಳ ಸಂಗಾತಿಗಳು ಮತ್ತು ಉದ್ಯೋಗಿಗಳ ಸಂಗಾತಿಗಳು, ಅಂತರಾಷ್ಟ್ರೀಯ ಸಂಸ್ಥೆಗಳ ಅಧಿಕಾರಿಗಳ ಕೆಲಸದ ಅವಧಿಯನ್ನು ದೀರ್ಘಕಾಲದವರೆಗೆ ವಿಸ್ತರಿಸಲಾಗಿದೆ ಎಂದು ಹೇಳಿದೆ.