ಮ್ಯಾಡ್ರಿಡ್: ಸ್ಪೇನ್‌ನಲ್ಲಿ ಸದ್ಯ ಬರಗಾಲ ತಾಂಡವವಾಡುತ್ತಿದೆ. ಈ ಬರದಿಂದ ಜನರು ಆಹಾರ ಸಿಗದೇ ಕಂಗಾಲಾಗುವಂತಾಗಿದೆ. ಈ ನಡುವೆ ಸಿಕ್ಕ ಆಹಾರದ ಬೆಲೆ ಗಗನಮುಖಿಯಾಗಿದ್ದು, ಜನರು ಪರಿತಪಿಸುವಂತೆ ಆಗಿದೆ. ದೇಶದಲ್ಲಿ ಅನೇಕ ಕಡೆ ಕ್ಷಾಮ ಎದುರಾಗಿದ್ದು, ಇದರಿಂದ ಆಹಾರ ಬೆಲೆ ಇನ್ನೂ ಹೆಚ್ಚಾಗಲಿದೆ ಎಂದು ಇಲ್ಲಿನ ಪ್ರಮುಖ ರೈತ ಸಂಘಟನೆಯ ವಕ್ತಾರರು ತಿಳಿಸಿದ್ದಾರೆ.
ಬರದಿಂದ ದೇಶದಲ್ಲಿ ಸದ್ಯ ಯಾವುದೇ ಆಹಾರವನ್ನು ಬೆಳೆಯಲು ಆಗುತ್ತಿಲ್ಲ. ಇದರಿಂದಾಗಿ ಬೇರೆ ದೇಶಗಳಿಂದ ಹಣ್ಣು, ತರಕಾರಿ ಸೇರಿದಂತೆ ಇನ್ನಿತರೆ ಆಹಾರಗಳನ್ನು ಆಮದು ಮಾಡಿಕೊಳ್ಳುವ ಅನಿವಾರ್ಯತೆ ಎದುರಾಗಿದೆ. ಇದರಿಂದ ಈ ಉತ್ಪನ್ನಗಳ ಬೆಲೆ ಹೆಚ್ಚಾಗಿರಲಿದೆ. ಅಲ್ಲದೆ, ಗ್ರಾಹಕರು ಅಧಿಕ ಬೆಲೆ ಅಥವಾ ಇನ್ನೂ ಹೆಚ್ಚಿನ ದರಕ್ಕೆ ವಸ್ತುಗಳನ್ನು ಖರೀದಿಸುವ ಸ್ಥಿತಿ ನಿರ್ಮಾಣವಾಗಲಿದೆ ಎಂದು ಕ್ಸಿನುಹು ಸುದ್ದಿ ಸಂಸ್ಥೆ ವರದಿ ಮಾಡಿದೆ.
ಯುರೋಪ್ನ ಇತರ ದೇಶಗಳಿಗೆ ಹೋಲಿಕೆ ಮಾಡಿದರೆ ಸ್ಪೇನ್ ಕಡಿಮೆ ಹಣದುಬ್ಬರ ದರವನ್ನು ಹೊಂದಿರುವ ದೇಶವಾಗಿದೆ. ಇಲ್ಲಿ ಹಣದುಬ್ಬರ ಕೇವಲ 3.8ರಷ್ಟಿದೆ. ಆದಾಗ್ಯೂ, ಆಹಾರ ದರ ಏರಿಕೆ ಮಾರ್ಚ್ 2022ರಿಂದ ನಿರಂತರ ಹೆಚ್ಚಾಗುತ್ತಿದ್ದು, ಶೇ 16.5ರಷ್ಟು ಹೆಚ್ಚಾಗಿದೆ ಎಂದು ಸ್ಪೇನ್ನ ರಾಷ್ಟ್ರೀಯ ಅಂಕಿ - ಅಂಶಗಳ ಸಂಸ್ಥೆ (ಐಎನ್ಇ) ತಿಳಿಸಿದೆ.
ಇನ್ನು, ಈ ಕುರಿತು ಮಾತನಾಡಿರುವ ರೈತರು ಮತ್ತು ಸಾಕಣೆದಾರರ ಸಂಘಟನೆಗಳ ಸಂಯೋಜಕರಾಗಿರುವ ಜೆನುಮೆ ಬೆರ್ನಿಸ್, ಸ್ಪೇನ್‌ನಲ್ಲಿ ಹೆಚ್ಚಿನ ಆಹಾರ ಬೆಲೆಗಳು ಕಚ್ಚಾ ವಸ್ತುಗಳು, ಶಕ್ತಿ ಮತ್ತು ರಸಗೊಬ್ಬರಗಳ ಬೆಲೆಗಳಲ್ಲಿ 45 ಪ್ರತಿಶತದಷ್ಟು ಹೆಚ್ಚಳಕ್ಕೆ ಕಾರಣವಾಗಿವೆ ಎಂದಿದ್ದಾರೆ. ಧಾನ್ಯ, ಶಕ್ತಿಯ ಬೆಲೆ ಇಳಿಕೆಯಾಗುತ್ತದೆ. ಆದರೂ, ರಸಗೊಬ್ಬರ ಬೆಲೆ ಕಡಿಮೆಯಾಗಿಲ್ಲ. ಇದು ಆಹಾರದ ಬೆಲೆ ಕುಸಿತ ಆರಂಭದ ಮೊದಲ ಸಂಕೇತವಾಗಿದೆ. ಮಳೆ ಈ ಸಮಸ್ಯೆಗಳಿಗೆಲ್ಲ ಪರಿಹಾರ ನೀಡಲಿದೆ ಎಂದಿದ್ದಾರೆ.