ಸ್ಯಾನ್ ಫ್ರಾನ್ಸಿಸ್ಕೋ: ಎಲೋನ್ ಮಸ್ಕ್ ಒಡೆತನದ ಸ್ಪೇಸ್‌ಎಕ್ಸ್ ತನ್ನ 54 ಸ್ಟಾರ್‌ಲಿಂಕ್ ಬ್ರಾಡ್‌ಬ್ಯಾಂಡ್ ಉಪಗ್ರಹಗಳನ್ನು ಶನಿವಾರ ಯಶಸ್ವಿಯಾಗಿ ಉಡಾವಣೆ ಮಾಡಿದೆ. ಎರಡು ಹಂತದಲ್ಲಿ ಫಾಲ್ಕನ್ 9 ರಾಕೆಟ್ ಉಡಾವಣೆ ಪ್ರಕ್ರಿಯೆ ನಡೆದಿದ್ದು, 54 ಸ್ಟಾರ್‌ಲಿಂಕ್ ಬಾಹ್ಯಾಕಾಶ ಉಪಗ್ರಹಗಳನ್ನು ಫ್ಲೋರಿಡಾದ ಕೇಪ್ ಕೆನವೆರಲ್ ಬಾಹ್ಯಾಕಾಶ ನೆಲೆಯಿಂದ ಗಗನಕ್ಕೆ ಶನಿವಾರ ರಾತ್ರಿ 11:41 ಕ್ಕೆ ಹಾರಿಸಲಾಯಿತು.
ಈ ರಾಕೆಟ್ಗಳನ್ನು ಉಡಾವಣೆ ಮಾಡುವ ವೇಳೆ ವಿಜ್ಞಾನಿಗಳ ತಂಡಕ್ಕೆ ಹವಾಮಾನ ವೈಪರೀತ್ಯ ಎದುರಾಗಿತ್ತು. ಹೀಗಾಗಿ ಸ್ಪೇಸ್‌ಎಕ್ಸ್ ನಿಗದಿತ ಸಮಯದಲ್ಲಿ ರಾಕೆಟ್ಗಳನ್ನು ಉಡಾವಣೆ ಮಾಡಲು ಸಾಧ್ಯವಾಗಲಿಲ್ಲ. 80 ನಿಮಿಷಗಳ ಕಾಲ ತಡವಾಗಿ ರಾಕೆಟ್ಗಳನ್ನು ಉಡಾಯಿಸಲಾಗಿದೆ. ಉಡಾವಣೆಯಾದ ಸುಮಾರು ಒಂಬತ್ತು ನಿಮಿಷಗಳೊಳಗೆ ಫಾಲ್ಕನ್ 9ರ ಮೊದಲ ಹಂತದ ರಾಕೆಟ್ ಫ್ಲೋರಿಡಾ ಕರಾವಳಿಯ ಅಟ್ಲಾಂಟಿಕ್ ಸಾಗರದಲ್ಲಿ ನೆಲೆಗೊಂಡಿರುವ ಎ ಶಾರ್ಟ್‌ಫಾಲ್ ಆಫ್ ಗ್ರಾವಿಟಾಸ್ ಸ್ಪೇಸ್‌ಎಕ್ಸ್ ಡ್ರೋನ್ ಶಿಪ್ನಲ್ಲಿ ಬಂದು ಇಳಿಯಿತು.