ಸಿಯೋಲ್, ದಕ್ಷಿಣ ಕೋರಿಯಾ:ದಕ್ಷಿಣ ಕೊರಿಯಾದ ಸಿಯೊಂಗ್ನಾಮ್ ನಗರದಲ್ಲಿ ವ್ಯಕ್ತಿಯೊಬ್ಬ ಪಾದಚಾರಿ ಮಾರ್ಗಕ್ಕೆ ನುಗ್ಗಿ ಪಾದಚಾರಿಗಳಿಗೆ ಡಿಕ್ಕಿ ಹೊಡೆದು, ವಾಹನದಿಂದ ಇಳಿದು ದಾರಿಹೋಕರ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ್ದಾನೆ. ಈ ಘಟನೆಯಲ್ಲಿ 14 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಶಂಕಿತ ವ್ಯಕ್ತಿ ಕಪ್ಪು ಸೂಟ್ ಮತ್ತು ಕನ್ನಡಕ ಧರಿಸಿ ಮಚ್ಚು ಝಳಪಿಸುತ್ತಿದ್ದರು ಎಂದು ಸ್ಥಳದಲ್ಲಿದ್ದ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
14 ಮಂದಿಗೆ ಗಾಯ:ಅಧಿಕಾರಿಗಳ ಪ್ರಕಾರ, ಕನಿಷ್ಠ ಒಂಬತ್ತು ಜನರು ಇರಿತಕ್ಕೊಳಗಾಗಿದ್ದಾರೆ. ಅವರಲ್ಲಿ ಎಂಟು ಮಂದಿ ಗಂಭೀರ ಸ್ಥಿತಿಯಲ್ಲಿದ್ದಾರೆ ಮತ್ತು ಇತರ ಐವರು ವಾಹನ ಡಿಕ್ಕಿಯಲ್ಲಿ ಗಾಯಗೊಂಡಿದ್ದಾರೆ, ಅವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.
ಸಿಕ್ಕಿರುವ ಮಾಹಿತಿ ಪ್ರಕಾರ:ಸಿಯೊಂಗ್ನಮ್ ನಗರದಲ್ಲಿ ಸರಿ ಸುಮಾರು ಸಂಜೆ 6 ಕ್ಕೆ ಶಂಕಿತ ವ್ಯಕ್ತಿ ಕಪ್ಪು ಸೂಟ್ ಮತ್ತು ಕನ್ನಡಕ ಧರಿಸಿ ಮೊದಲು ಪಾದಚಾರಿ ಮಾರ್ಗದಲ್ಲಿ ಕಾರು ನುಗ್ಗಿಸಿದ್ದಾನೆ. ಆ ವೇಳೆ, ಐವರು ಗಾಯಗೊಂಡಿದ್ದರು. ಬಳಿಕ ಕಾರಿನಿಂದ ಇಳಿದು ಸುಮಾರು 9 ಜನರ ಮೇಲೆ ಚಾಕುವಿನಿಂದ ದಾಳಿ ನಡೆಸಿದ್ದಾನೆ. ಘಟನೆಯ ಬಗ್ಗೆ ಮಾಹಿತಿ ನೀಡಿದ ಐದು ನಿಮಿಷಗಳ ನಂತರ ಪೊಲೀಸರು 20 ಶಂಕಿತರನ್ನು ಬಂಧಿಸಿದ್ದಾರೆ.
ಜನದಟ್ಟಣೆ ಇರುವ ಪ್ರದೇಶಗಳಲ್ಲಿ ಗಸ್ತು ಹೆಚ್ಚು:ದಕ್ಷಿಣ ಕೊರಿಯಾದ ಪೊಲೀಸ್ ಮುಖ್ಯಸ್ಥರು ಅಪಘಾತವನ್ನು "ಭಯೋತ್ಪಾದನೆಯ ಕೃತ್ಯ" ಎಂದು ಕರೆದಿದ್ದಾರೆ. ಜನನಿಬಿಡ ಪ್ರದೇಶಗಳಲ್ಲಿ ಗಸ್ತು ಹೆಚ್ಚಿಸಲಾಗುವುದು ಮತ್ತು ಭದ್ರತಾ ಕ್ಯಾಮೆರಾಗಳ ಮೂಲಕ ಕಣ್ಗಾವಲು ಬಲಪಡಿಸಲಾಗುವುದು ಎಂದು ಹೇಳಿದರು.