ಸಿಯೋಲ್ (ದಕ್ಷಿಣ ಕೊರಿಯಾ): ಪೂರ್ಣ ದೇಹದ ಲೈಂಗಿಕ ಗೊಂಬೆಗಳ ಆಮದು ಮೇಲಿನ ನಿಷೇಧವನ್ನು ದಕ್ಷಿಣ ಕೊರಿಯಾ ತೆಗೆದುಹಾಕಿದೆ. ಜನರ ಖಾಸಗಿ ಜೀವನದಲ್ಲಿ ಸರ್ಕಾರ ಎಷ್ಟರ ಮಟ್ಟಿಗೆ ಹಸ್ತಕ್ಷೇಪ ಮಾಡಬಹುದು ಎಂಬ ಚರ್ಚೆಗೆ ಈ ಮೂಲಕ ಅಂತ್ಯ ಹಾಡಿದೆ.
ಲೈಂಗಿಕ ಗೊಂಬೆಗಳ ಆಮದು ನಿಷೇಧಿಸುವ ಯಾವುದೇ ಕಾನೂನು ಅಥವಾ ನಿಬಂಧನೆಗಳು ಇಲ್ಲದಿದ್ದರೂ, ಸಾವಿರಾರು ಲೈಂಗಿಕ ಗೊಂಬೆಗಳನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದರು. ಇವು ದೇಶದ ಸಂಪ್ರದಾಯಗಳು ಮತ್ತು ಸಾರ್ವಜನಿಕ ನೈತಿಕತೆಗೆ ಹಾನಿ ಉಂಟುಮಾಡುವ ಸರಕುಗಳು ಎಂದು ಅವರು ಹೇಳುತ್ತಿದ್ದರು. ಈ ನಿರ್ಧಾರ ಪ್ರಶ್ನಿಸಿ ಗೊಂಬೆಗಳ ಆಮದುದಾರರು ನ್ಯಾಯಾಲಯಗಳ ಮೊರೆ ಹೋಗಿದ್ದರು. ನ್ಯಾಯಾಲಯವು ಇವುಗಳ ಬಳಕೆಗೆ ಒಪ್ಪಿಗೆ ನೀಡಿ ಮತ್ತು ವಶಪಡಿಸಿಕೊಂಡಿರುವ ಲೈಂಗಿಕ ಗೊಂಬೆಗಳನ್ನು ಬಿಡುಗಡೆ ಮಾಡಲು ಕಸ್ಟಮ್ಸ್ಗೆ ಆದೇಶಿಸಿತ್ತು. ಅವುಗಳನ್ನು ಜನರು ಖಾಸಗಿ ಸ್ಥಳಗಳಲ್ಲಿ ಬಳಸುತ್ತಿದ್ದಾರೆ. ಇದರ ಬಳಕೆಯು ಮಾನವ ಘನತೆಗೆ ಧಕ್ಕೆ ತರುವುದಿಲ್ಲ ಎಂದು ಕೋರ್ಟ್ ಹೇಳಿತ್ತು.
ಸೋಮವಾರ ಕೊರಿಯಾ ಕಸ್ಟಮ್ಸ್ ಸೇವೆ ಅಧಿಕಾರಿಗಳು ನಡೆಸಿದ ಮಾಧ್ಯಮಗೋಷ್ಠಿಯಲ್ಲಿ ದೇಶಕ್ಕೆ ಲೈಂಗಿಕ ಗೊಂಬೆಗಳನ್ನು ಆಮದು ಮಾಡಿಕೊಳ್ಳಲು ಪರಿಷ್ಕೃತ ಮಾರ್ಗಸೂಚಿಯನ್ನು ಜಾರಿಗೊಳಿಸಲು ಪ್ರಾರಂಭಿಸಲಾಗಿದೆ ಎಂದು ತಿಳಿಸಿತು. ಇದಕ್ಕಾಗಿ ಲಿಂಗ ಸಮಾನತೆ ಮತ್ತು ಕುಟುಂಬ ಸಚಿವಾಲಯ ಸೇರಿದಂತೆ ಸಂಬಂಧಿತ ಸರ್ಕಾರಿ ಏಜೆನ್ಸಿಗಳಿಂದ ಇತ್ತೀಚಿನ ನ್ಯಾಯಾಲಯದ ತೀರ್ಪುಗಳು ಮತ್ತು ಅಭಿಪ್ರಾಯಗಳನ್ನು ಪರಿಶೀಲಿಸಲಾಗಿದೆ ಎಂದು ತಿಳಿಸಿದ್ದಾರೆ.
ಆದರೆ, ಮಗುವಿನಂತಹ ಲೈಂಗಿಕ ಗೊಂಬೆಗಳು ಅಥವಾ ಕೆಲವು ವ್ಯಕ್ತಿಗಳನ್ನು ಸಾಕಾರಗೊಳಿಸುವ ಇತರ ಆಮದುಗಳನ್ನು ನಿಷೇಧಿಸುವುದಾಗಿ ಕಸ್ಟಮ್ಸ್ ಹೇಳಿದೆ. ಯುನೈಟೆಡ್ ಸ್ಟೇಟ್ಸ್, ಆಸ್ಟ್ರೇಲಿಯಾ ಮತ್ತು ಯುಕೆಯಂತಹ ಇತರ ದೇಶಗಳು ಸಹ ಮಗುವಿನಂತಹ ಲೈಂಗಿಕ ಗೊಂಬೆಗಳನ್ನು ನಿಷೇಧಿಸಿವೆ ಎಂದು ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ಕೆಲವು ಮಹಿಳಾ ಹಕ್ಕುಗಳ ಸಂಘಟನೆಗಳು ಮತ್ತು ಸಂಪ್ರದಾಯವಾದಿ ಸಂಸ್ಥೆಗಳು ಲೈಂಗಿಕ ಗೊಂಬೆಗಳ ಬಳಕೆಗೆ ತಮ್ಮ ವಿರೋಧ ವ್ಯಕ್ತಪಡಿಸಿವೆ.